ಮಂಗಳೂರು: ಕರಾವಳಿಯ ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವ ‘ಮಂಗಳೂರು ದಸರಾ’ ಹಬ್ಬದ ಸುದಿನಗಳಲ್ಲೇ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಿರುವುದನ್ನು ವಿರೋಧಿಸಿ, ನಗರದ ಸೈಂಟ್ ಆಗ್ನೆಸ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಸೋಮವಾರದಂದು (ಅಕ್ಟೋಬರ್ 12, 2026) ರಸ್ತೆಗಿಳಿದು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಹಬ್ಬದ ದಿನಗಳಲ್ಲಿ ಪರೀಕ್ಷೆ ನಡೆಸುತ್ತಿರುವ ಆಡಳಿತ ಮಂಡಳಿಯ ಹಠಮಾರಿ ಧೋರಣೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ವಿದ್ಯಾರ್ಥಿ ಹೋರಾಟಕ್ಕೆ ರಾಜಕೀಯ ವಲಯದಿಂದಲೂ ಬೆಂಬಲ ವ್ಯಕ್ತವಾಗಿದೆ.
ಪ್ರಕರಣದ ಹಿನ್ನೆಲೆ:
ಮಂಗಳೂರಿನ ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಅಕ್ಟೋಬರ್ 12 ರಿಂದ ಅಕ್ಟೋಬರ್ 28, 2026ರ ಅವಧಿಯಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ. ಆದರೆ, ಇಡೀ ಕರಾವಳಿ ಭಾಗ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುವ ನವರಾತ್ರಿ ಮತ್ತು ಮಂಗಳೂರು ದಸರಾ ಉತ್ಸವವು ಇದೇ ಅವಧಿಯಲ್ಲಿ ನಡೀತಿರುವುದರಿಂದ, ಪರೀಕ್ಷೆಗಳನ್ನು ಸ್ವಲ್ಪ ದಿನಗಳ ಕಾಲ ಮುಂದೂಡುವಂತೆ ವಿದ್ಯಾರ್ಥಿಗಳು ಆಡಳಿತ ಮಂಡಳಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಕರಾವಳಿಯ ಇತರ ಕಾಲೇಜುಗಳು ಹಬ್ಬದ ಕಾರಣ ನೀಡಿ ಪರೀಕ್ಷೆಗಳನ್ನು ಮುಂದೂಡಿರುವ ಉದಾಹರಣೆಗಳಿದ್ದರೂ, ಸೈಂಟ್ ಆಗ್ನೆಸ್ ಕಾಲೇಜು ಮಾತ್ರ ನಿಗದಿತ ವೇಳಾಪಟ್ಟಿಯಲ್ಲೇ ಪರೀಕ್ಷೆ ನಡೆಸಲು ಹಠ ಹಿಡಿದಿದೆ. ಆಡಳಿತ ಮಂಡಳಿಯ ಈ ತೀರ್ಮಾನದಿಂದ ಬೇಸತ್ತ ನೂರಾರು ವಿದ್ಯಾರ್ಥಿಗಳು ಸೋಮವಾರ ಕಾಲೇಜು ಮುಂಭಾಗ ಜಮಾಯಿಸಿ, ಘೋಷಣೆಗಳನ್ನು ಕೂಗುತ್ತಾ ಪರೀಕ್ಷೆ ಮುಂದೂಡುವಂತೆ ಪಟ್ಟು ಹಿಡಿದರು.
ವಿದ್ಯಾರ್ಥಿಗಳ ಭಾವನೆಗಳಿಗೆ ಬೆಲೆ ಕೊಡಿ – ಮಾಜಿ ಸಚಿವ ವಿ. ಸುನೀಲ್ ಕುಮಾರ್:
ವಿದ್ಯಾರ್ಥಿಗಳ ಈ ನ್ಯಾಯಯುತ ಪ್ರತಿಭಟನೆಗೆ ಧ್ವನಿ ನೀಡಿರುವ ಮಾಜಿ ಸಚಿವ ಹಾಗೂ ಉಡುಪಿ ಜಿಲ್ಲೆಯ ಪ್ರಮುಖ ಬಿಜೆಪಿ ನಾಯಕ ವಿ. ಸುನೀಲ್ ಕುಮಾರ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ ಕಾಲೇಜು ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
“ದಸರಾ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುತ್ತಿರುವುದು ಅತ್ಯಂತ ಖಂಡನೀಯ. ವಿದ್ಯಾರ್ಥಿಗಳು ತಮ್ಮ ಕುಟುಂಬದೊಂದಿಗೆ ಹಬ್ಬ ಆಚರಿಸಲು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಆದರೆ, ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿ ಕಾಲೇಜು ಆಡಳಿತ ಮಂಡಳಿ ಹಠ ಹಿಡಿದಿರುವುದು ಸರಿಯಲ್ಲ. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿಚಾರ ಬಂದಾಗ ಎಲ್ಲಿಲ್ಲದ ಆದ್ಯತೆ ನೀಡುವ ಕಾಂಗ್ರೆಸ್ ಸರ್ಕಾರ, ಈಗ ಈ ಸಾಮಾನ್ಯ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಉನ್ನತಾಧಿಕಾರಿಗಳ ಮಧ್ಯಪ್ರವೇಶಕ್ಕೆ ಒತ್ತಾಯ:
ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಮತ್ತು ಮಾನಸಿಕ ನೆಮ್ಮದಿಗೆ ಧಕ್ಕೆಯಾಗದಂತೆ ಪರೀಕ್ಷೆಗಳನ್ನು ತಕ್ಷಣವೇ ಮುಂದೂಡಬೇಕು ಎಂದು ಒತ್ತಾಯಿಸಿರುವ ಸುನೀಲ್ ಕುಮಾರ್, ಉನ್ನತ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮ್ಯಾಂಗಲೋರ್ ವಿಶ್ವವಿದ್ಯಾಲಯದ ಜವಾಬ್ದಾರರು ತಕ್ಷಣವೇ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು. ಕಾಲೇಜು ಮಂಡಳಿಯೊಂದಿಗೆ ಮಾತುಕತೆ ನಡೆಸಿ ವಿದ್ಯಾರ್ಥಿಗಳ ಪರವಾಗಿ ಸಕಾರಾತ್ಮಕ ನಿರ್ಧಾರ ಹೊರಬೀಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

