Tue. Oct 13th, 2026

ಕೇವಲ ಕೇಕೆ, ಶಿಳ್ಳೆ ಪಡೆಯೋದಲ್ಲ; ಮೀಸಲಾತಿ ಹೋರಾಟದ ನಾಯಕತ್ವ ವಹಿಸಿ: ನಟ ಕಿಚ್ಚ ಸುದೀಪ್‌ಗೆ ವಿ.ಎಸ್. ಉಗ್ರಪ್ಪ ಬಹಿರಂಗ ಸವಾಲು

Share this with Friends

ಚಿತ್ರದುರ್ಗ: “ಚಿತ್ರರಂಗದ ಯಶಸ್ಸಿನ ಮೂಲಕ ಅಭಿಮಾನಿಗಳಿಂದ ಕೇವಲ ಕೇಕೆ ಹಾಗೂ ಶಿಳ್ಳೆ ಗಿಟ್ಟಿಸಿಕೊಳ್ಳುವುದಷ್ಟೇ ಅಲ್ಲ; ನಾಯಕ (ST) ಸಮುದಾಯದ ನೈಜ ಮನೆಯ ಮಗನಾಗಿದ್ದರೆ ಬೀದಿಗೆ ಬಂದು ಜನಾಂಗದ ಹಕ್ಕುಗಳಿಗಾಗಿ ಧ್ವನಿ ಎತ್ತಿ” ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಜನಪ್ರಿಯ ನಟ ಕಿಚ್ಚ ಸುದೀಪ್ ಗೆ ಸವಾಲು ಹಾಕಿದ್ದಾರೆ.

ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವೀರ ಮದಕರಿ ನಾಯಕ ಜಯಂತ್ಯುತ್ಸವ’ ಸಮಾರಂಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಎಸ್‌ಟಿ (ST) ಸಮುದಾಯದ ಮೀಸಲಾತಿ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ನಟ ಸುದೀಪ್ ಅವರು ವಹಿಸಿರುವ ಮೌನದ ವಿರುದ್ಧ ತೀವ್ರವಾಗಿ ಗುಡುಗಿದರು.

ದಮ್ಮು, ತಾಕತ್ ಇದ್ದರೆ ಹೋರಾಟದ ಮುಂಚೂಣಿಗೆ ಬನ್ನಿ:

ಚಿತ್ರದುರ್ಗದ ಕೋಟೆ ನಾಡಿನಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳ ಸಮ್ಮುಖದಲ್ಲೇ ಸುದೀಪ್ ಅವರಿಗೆ ಬಹಿರಂಗ ಸವಾಲು ಹಾಕಿದ ಉಗ್ರಪ್ಪ, “ನೀವೆಲ್ಲರೂ ಜೈ ಕಿಚ್ಚ, ಕಿಚ್ಚ ಅಂತ ಕೂಗುತ್ತೀರಲ್ಲಾ, ಆ ಸುದೀಪ್‌ಗೆ ನಿಜಕ್ಕೂ ನಮ್ಮ ಜನಾಂಗದ ಮೇಲೆ ಕಾಳಜಿ ಇದ್ದರೆ ಬೀದಿಗಿಳಿದು ಹೋರಾಡಲಿ. ಇತ್ತೀಚಿನ ಹೈಕೋರ್ಟ್ ಆದೇಶದಿಂದಾಗಿ ಎಸ್‌ಟಿ ಸಮುದಾಯದ ಮೀಸಲಾತಿ ಪ್ರಮಾಣಕ್ಕೆ ತೊಂದರೆಯಾಗಿದೆ. ಈ ಶೇ 56 ರಷ್ಟು ಹೆಚ್ಚುವರಿ ಮೀಸಲಾತಿಯನ್ನು ಉಳಿಸಿಕೊಳ್ಳುವ ಹೋರಾಟಕ್ಕೆ ಸುದೀಪ್ ಅವರೇ ನೇರ ನಾಯಕತ್ವ ವಹಿಸಿಕೊಳ್ಳಲಿ ಎಂದು ನಾನು ಕರೆ ನೀಡುತ್ತಿದ್ದೇನೆ. ಅವರಿಗೆ ನಿಜಕ್ಕೂ ದಮ್ಮು ಹಾಗೂ ತಾಕತ್ತಿದ್ದರೆ ಈ ಹೋರಾಟದ ಮುಂಚೂಣಿಗೆ ಬರಲಿ” ಎಂದು ರೋಷಾವೇಷದ ಭಾಷಣ ಮಾಡಿದರು.

ಚಿತ್ರದುರ್ಗದಲ್ಲಿ ಮದಕರಿ ನಾಯಕ ಸ್ಮಾರಕಕ್ಕೆ ಆಗ್ರಹ:

ಯಾವ ಸಮಾಜದಲ್ಲಿ ಸಾಮಾಜಿಕ ಜಾಗೃತಿ, ವೈಚಾರಿಕತೆ ಹಾಗೂ ಸಂಘಟನಾ ಶಕ್ತಿ ಇರುವುದಿಲ್ಲವೋ ಅಂತಹ ಸಮಾಜ ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ಮದಕರಿ ನಾಯಕರ ಹೆಸರಿನಲ್ಲಿ ರಾಜ್ಯ ಸರ್ಕಾರವು ತಕ್ಷಣವೇ ಪ್ರತ್ಯೇಕ ಪ್ರಾಧಿಕಾರವನ್ನು ರಚಿಸಬೇಕು ಹಾಗೂ ಚಿತ್ರದುರ್ಗದಲ್ಲಿ ಭವ್ಯ ಸ್ಮಾರಕವನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಹೈಕೋರ್ಟ್‌ನ ಇತ್ತೀಚಿನ ತೀರ್ಪಿನ ವಿರುದ್ಧ ಸರ್ಕಾರ ತಕ್ಷಣ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ಸಮುದಾಯದ ನ್ಯಾಯಸಮ್ಮತ ಹಕ್ಕನ್ನು ಕಾಯ್ದುಕೊಳ್ಳಬೇಕು ಎಂದ ಅವರು, ತಮ್ಮ ಕೊನೆಯ ಉಸಿರಿರುವವರೆಗೂ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಪರವಾಗಿ ಹೋರಾಡುವುದಾಗಿ ಭರವಸೆ ನೀಡಿದರು.

ರಾಜಕೀಯ ಲಾಭಕ್ಕಾಗಿ ಹಾಗೂ ವೇದಿಕೆಗಳಲ್ಲಿ ಸಮುದಾಯದ ಹೆಸರು ಬಳಸಿಕೊಳ್ಳುವ ಸಿನಿಮಾ ನಟರು ಇಂತಹ ನಿರ್ಣಾಯಕ ಸಾಂವಿಧಾನಿಕ ಹಕ್ಕುಗಳ ಹೋರಾಟದ ಸಂದರ್ಭದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ಉಗ್ರಪ್ಪ ಅವರು ಈ ಸಂದರ್ಭದಲ್ಲಿ ಕಟುವಾಗಿ ಟೀಕಿಸಿದರು.

 

 


Share this with Friends

Related Post