ಬೆಂಗಳೂರು: ಆಯ್ದ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಪೋಕನ್ ಇಂಗ್ಲಿಷ್ (Spoken English) ತರಬೇತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅರ್ಹ ಅತಿಥಿ ಶಿಕ್ಷಕರು/ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಂತೆ ಸಮಗ್ರ ಶಿಕ್ಷಣ ಕರ್ನಾಟಕ ಇಲಾಖೆಯು ರಾಜ್ಯಾದ್ಯಂತ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ಇಲಾಖೆಯ ರಾಜ್ಯ ಯೋಜನಾ ನಿರ್ದೇಶಕರಾದ ಕೆ. ವಿದ್ಯಾಕುಮಾರಿ ಅವರ ಡಿಜಿಟಲ್ ಸಹಿಯೊಂದಿಗೆ ಈ ಅಧಿಕೃತ ಆದೇಶವನ್ನು ಬಿಡುಗಡೆ ಮಾಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಈ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ.
ಆರು ತಿಂಗಳ ಅವಧಿಯ ತರಬೇತಿ ಕಾರ್ಯಕ್ರಮ:
ಚಾಲ್ತಿಯಲ್ಲಿರುವ 2026-27ನೇ ಸಾಲಿನಲ್ಲಿ ಆಯ್ದ ಕಾಲೇಜುಗಳಲ್ಲಿ ಒಟ್ಟು 6 ತಿಂಗಳ ಅವಧಿಗೆ ಮಾತ್ರ ಸೀಮಿತವಾಗುವಂತೆ ಈ ಸ್ಪೋಕನ್ ಇಂಗ್ಲಿಷ್ ತರಬೇತಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಆಯಾ ಕಾಲೇಜುಗಳ ಸಂಬಂಧಪಟ್ಟ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳು (SDMC) ಇಲಾಖೆಯ ನಿಯಮಾವಳಿಗಳ ಅನ್ವೇಷಣೆಯಲ್ಲಿ ಈ ಅತಿಥಿ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಬೇಕಿದೆ.
ಅರ್ಹತೆ ಮತ್ತು ನೇಮಕಾತಿ ಮಾನದಂಡಗಳು:
ಈ ಯೋಜನೆಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಇಲಾಖೆಯು ಈ ಕೆಳಗಿನ ಪ್ರಮುಖ ಅರ್ಹತೆಗಳನ್ನು ಕಡ್ಡಾಯಗೊಳಿಸಿದೆ:
ಅಭ್ಯರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಪರಿಣತಿಯನ್ನು ಹೊಂದಿರಬೇಕು.
ಕಲಾ ಪದವಿ (ಬಿ.ಎ.) ಉತ್ತೀರ್ಣರಾಗಿದ್ದು, ಅದರಲ್ಲಿ ‘Optional English’ ವಿಷಯವನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕು.
ಅಥವಾ English Honours ನಲ್ಲಿ ಪದವಿ ಪಡೆದಿರಬೇಕು ಇಲ್ಲವೇ ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ (Post Graduation) ಪದವಿಯನ್ನು ಹೊಂದಿರಬೇಕು.
ಪ್ರಾಥಮಿಕ ಶಿಕ್ಷಣ ಇಂಗ್ಲಿಷ್ ಮಾಧ್ಯಮದಲ್ಲಿದ್ದವರಿಗೆ ಆದ್ಯತೆ:
ಧಾರವಾಡ ಮತ್ತು ಬೆಳಗಾವಿ ವಿಭಾಗದ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ನಡೆಸಿದ ಜೂಮ್ ಸಭೆಯ ತೀರ್ಮಾನದಂತೆ ಅರ್ಹತಾ ಮಾನದಂಡದಲ್ಲಿ ಪ್ರಮುಖ ಸಡಿಲಿಕೆ ನೀಡಲಾಗಿದೆ. ಅದರಂತೆ, ಅಭ್ಯರ್ಥಿಯು ಪ್ರಾಥಮಿಕ ತರಗತಿಯಿಂದ ಪದವಿ ಹಂತದವರೆಗೆ ಇಂಗ್ಲಿಷ್ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ವ್ಯಾಸಂಗ ಮಾಡಿದ್ದು, ಇಂಗ್ಲಿಷ್ ಭಾಷೆಯನ್ನು ಅತ್ಯಂತ ಸುಲಲಿತವಾಗಿ (Fluent) ಮಾತನಾಡಬಲ್ಲವರಾಗಿದ್ದರೆ ಅಂತಹ ಅಭ್ಯರ್ಥಿಗಳನ್ನೂ ಸಹ ಅತಿಥಿ ಶಿಕ್ಷಕರ ನೇಮಕಾತಿಗೆ ಪರಿಗಣಿಸಬಹುದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅರ್ಹ ಅಭ್ಯರ್ಥಿಗಳನ್ನು ತಕ್ಷಣವೇ ನೇಮಕ ಮಾಡಿಕೊಂಡು, ಅದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನಿಗದಿತ ಅನುಬಂಧ-1 ರ ಫಾರ್ಮ್ಯಾಟ್‌ನಲ್ಲಿ ಇಲಾಖೆಯ ಅಧಿಕೃತ ಇ-ಮೇಲ್ ಐಡಿ (sskpoecell@gmail.com) ಗೆ ಸಲ್ಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರಿಗೆ (DDPI) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

