ಬೆಂಗಳೂರು: “ಬ್ಲಾಕ್ ಮೇಲ್ ಮಾಡುವವರಿಗೆ ರಕ್ಷಣೆ ನೀಡಲು ಮತ್ತು ಇಷ್ಟ ಬಂದವರನ್ನೆಲ್ಲ ಕರೆಸಿ ತನಿಖೆ ನಡೆಸಲು ಗೃಹ ಇಲಾಖೆ ಏನೇನೂ ನಿಮ್ಮಪ್ಪ ಕೊಟ್ಟ ಬಳುವಳಿಯಲ್ಲ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರವಾಗಿ ಗುಡುಗಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆದ ಜಂಟಿ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಕಿರಾತಕರಿಗೆ ಪಾಠ ಕಲಿಸುವ ಸಮಯ ಹತ್ತಿರ ಬಂದಿದೆ:
ತಮ್ಮನ್ನು ವಿಚಾರಣೆಗೆ ಒಳಪಡಿಸುವುದಾಗಿ ಹೇಳಿಕೆ ನೀಡಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ನೇರ ಸವಾಲು ಹಾಕಿದ ಕುಮಾರಸ್ವಾಮಿ, “ನಾನೇನು ನಿಮ್ಮಪ್ಪನ ಗಂಟು ತಿಂದಿದ್ದೀನಾ? ಧೈರ್ಯವಿದ್ದರೆ ಬಂದು ನನ್ನನ್ನು, ನನ್ನ ಕಾರ್ಯಕರ್ತರನ್ನು ಮುಟ್ಟಿ ನೋಡಿ, ಆಮೇಲೆ ಏನಾಗುತ್ತದೆ ಎಂದು ತೋರಿಸುತ್ತೇವೆ. ನಾಚಿಕೆಯಿಲ್ಲದೆ ಬ್ಲಾಕ್ ಮೇಲ್ ಮತ್ತು ಸ್ಟಿಂಗ್ ಆಪರೇಷನ್ ಮಾಡುವ ದುಷ್ಟರಿಗೆ ಸರ್ಕಾರವೇ ಬೆಂಗಾವಲಾಗಿ ನಿಂತಿದೆ. ಇಂತಹ ಕಿರಾತಕರಿಗೆ ಪಾಠ ಕಲಿಸುವ ಸಮಯ ಹತ್ತಿರ ಬಂದಿದೆ” ಎಂದು ಎಚ್ಚರಿಕೆ ನೀಡಿದರು. ರಾಕೇಶ್ ಶೆಟ್ಟಿ ಎಂಬ ವ್ಯಕ್ತಿಗೂ ಮುಖ್ಯಮಂತ್ರಿಗಳಿಗೂ ಇರುವ ಸಂಬಂಧವೇನು ಮತ್ತು ಆತನಿಗೆ ಸರ್ಕಾರ ರಕ್ಷಣೆ ನೀಡುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದರು.
ಹಾಲಿ ನ್ಯಾಯಾಧೀಶರ ತನಿಖೆಗೆ ಮುಕ್ತ ಸವಾಲು:
ಸುಳ್ಳು ಪ್ರಕರಣಗಳು ಮತ್ತು ಬೆದರಿಕೆಗಳಿಗೆ ತಾವು ಎಂದಿಗೂ ಜಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಹೆಚ್ಡಿಕೆ, “ಪ್ರಿಯಾಂಕ್ ಖರ್ಗೆ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ತಾಕತ್ತಿದ್ದರೆ, ಈ ಇಡೀ ಪ್ರಕರಣವನ್ನು ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಲಿ. ನಾನು ಗಂಡಸ್ತನದಿಂದ ನೇರವಾಗಿ ಪ್ರಶ್ನೆ ಮಾಡುತ್ತಿದ್ದೇನೆ, ನಿಮ್ಮಂತೆ ಹೇಡಿಗಳ ತರಹ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿಲ್ಲ” ಎಂದು ಸವಾಲು ಎಸೆದರು.
ಎಇಇ ನೇಮಕಾತಿ ಅಕ್ರಮದ ಆರೋಪ:
ಪ್ರಿಯಾಂಕ್ ಖರ್ಗೆ ಅವರು ಈ ಹಿಂದೆ ಪಂಚಾಯತ್ ರಾಜ್ ಸಚಿವರಾಗಿದ್ದ ಅವಧಿಯಲ್ಲಿ 24 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ಗಳ (AEE) ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ದಾಖಲೆಗಳನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, “ದೊಡ್ಡ ಮಟ್ಟದ ಪಾರದರ್ಶಕತೆ ಮಾತನಾಡುವ ನೀವು, ಈ ಎಇಇ ನೇಮಕಾತಿ ಹಗರಣದ ಬಗ್ಗೆ ಇವತ್ತಿನವರೆಗೂ ಏಕೆ ತುಟಿ ಬಿಚ್ಚಿಲ್ಲ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

