Wed. Oct 14th, 2026

ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ವಾವಲಂಬನೆ ಹೆಚ್ಚಿಸಲು ಕಟ್ಟುನಿಟ್ಟಿನ ಕ್ರಮ:ಸಿಎಂ 

Share this with Friends

ಬೆಂಗಳೂರು: ರಾಜ್ಯದಲ್ಲಿ ತಳಮಟ್ಟದ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸಲು ಸರ್ಕಾರ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 5ನೇ ರಾಜ್ಯ ಹಣಕಾಸು ಆಯೋಗದ ವರದಿಯ ಅನ್ವಯ ಗ್ರಾಮ ಪಂಚಾಯಿತಿಗಳಿಗೆ ₹1,261 ಕೋಟಿ, ತಾಲ್ಲೂಕು ಪಂಚಾಯಿತಿಗಳಿಗೆ ₹557 ಕೋಟಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ₹183 ಕೋಟಿ ಸೇರಿದಂತೆ ಭಾರಿ ಮೊತ್ತದ ಅನುದಾನವನ್ನು ಈಗಾಗಲೇ ಮುಕ್ತಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

ಆಡಳಿತ ಸುಧಾರಣೆ ಮತ್ತು ಹಣಕಾಸು ಹಂಚಿಕೆಗೆ ಸಂಬಂಧಿಸಿದ ಶಿಫಾರಸುಗಳನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ಗ್ರಾಮೀಣಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ವಿಶೇಷ ಸಮಿತಿಯೊಂದನ್ನು ರಚಿಸಲಾಗುವುದು. ನಗರ ಸ್ಥಳೀಯ ಸಂಸ್ಥೆಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಂವಿಧಾನದ 74ನೇ ತಿದ್ದುಪಡಿಯ ಆಶಯದಂತೆ ಕಾಯ್ದೆಗಳಿಗೆ ಅಗತ್ಯ ಮಾರ್ಪಾಡು ತರಲಾಗುವುದು. ಇದಕ್ಕಾಗಿ ನ್ಯಾಷನಲ್ ಲಾ ಕಾಲೇಜಿನ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಗ್ರಾಮೀಣ ಭಾಗದ ಗ್ರಾಮಸಭೆಗಳ ಮಾದರಿಯಲ್ಲೇ ನಗರ ಪ್ರದೇಶಗಳಲ್ಲೂ ‘ವಾರ್ಡ್ ಸಭೆಗಳನ್ನು’ ರಚಿಸಿ ತಳಮಟ್ಟದಿಂದಲೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುವುದು. ಜಿಲ್ಲಾ ಯೋಜನಾ ಸಮಿತಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ ಪ್ರಗತಿ ವರದಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಸಾರ್ವಜನಿಕರ ನೇರ ಬೇಡಿಕೆಗಳನ್ನು ಸ್ವೀಕರಿಸಿ ರಾಜ್ಯ ಬಜೆಟ್‌ನಲ್ಲಿ ಅಳವಡಿಸುವ ಮಹತ್ವಾಕಾಂಕ್ಷೆಯ ‘ಜನರ ಯೋಜನೆ’ ಅನುಷ್ಠಾನಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳು ಶೀಘ್ರದಲ್ಲೇ ಸೂಕ್ತ ಮಾರ್ಗಸೂಚಿ ಹಾಗೂ ವಿಶೇಷ ತಂತ್ರಾಂಶವನ್ನು ಸಿದ್ಧಪಡಿಸಲಿವೆ. ಸ್ಥಳೀಯ ಸಂಸ್ಥೆಗಳ ಆದಾಯ ಮೂಲವನ್ನು ವಿಸ್ತರಿಸುವ ನಿಟ್ಟಿನಲ್ಲಿ, ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಜಿಎಸ್‌ಟಿ (GST) ತೆರಿಗೆ ಸಂಗ್ರಹಣೆಯಲ್ಲಿ ನಿಗದಿತ ಪಾಲು ನೀಡುವಂತೆ ಕೇಂದ್ರದ ಜಿಎಸ್‌ಟಿ ಮಂಡಳಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರೊಂದಿಗೆ ಕರ್ನಾಟಕ ಪಂಚಾಯತ್ ಆಡಳಿತಾತ್ಮಕ ಸೇವೆಯನ್ನು (KPAS) ಆರಂಭಿಸುವ ಕುರಿತು ಕರಡು ಸಿದ್ಧಪಡಿಸುವಂತೆ ಇಲಾಖಾ ಸಚಿವರಿಗೆ ಸೂಚಿಸಲಾಗಿದೆ.

ಕೈಗಾರಿಕಾ ಪ್ರದೇಶಗಳಲ್ಲಿ ಕೆಐಎಡಿಬಿ (KIADB) ಸಂಗ್ರಹಿಸುವ ಸ್ವತ್ತು ತೆರಿಗೆಯಲ್ಲಿ ಶೇ. 30 ರಷ್ಟು ಪಾಲನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ಕಡ್ಡಾಯವಾಗಿ ವರ್ಗಾಯಿಸಬೇಕು. ಈವರೆಗೆ ಹಂಚಿಕೆಯಾಗಿರುವ ಮೊತ್ತದ ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದ ಮುಖ್ಯಮಂತ್ರಿಗಳು, ಗ್ರಾಮ ಠಾಣಾ ಗಡಿಗಳನ್ನು ನಿಗದಿಪಡಿಸುವ ಕಾರ್ಯವನ್ನು ತ್ವರಿತಗೊಳಿಸಲು ಪಂಚಾಯತ್ ರಾಜ್ ಮತ್ತು ಕಂದಾಯ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.

 

 


Share this with Friends

Related Post