Thu. Oct 15th, 2026

ಬಂಡೀಪುರದಲ್ಲಿ ಹುಲಿ ಸಾವು, ಆನೆ ದಂತ ನಾಪತ್ತೆ: ಸಮಗ್ರ ತನಿಖೆಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಆದೇಶ

Share this with Friends

ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಹುಲಿಯೊಂದು ಉರುಳಿಗೆ ಸಿಲುಕಿ ಸಾವನ್ನಪ್ಪಿರುವುದು ಹಾಗೂ ಕರಡಿಕಲ್ಲು ಗುಡ್ಡ ಪ್ರದೇಶದಲ್ಲಿ ಮೃತಪಟ್ಟ ಕಾಡಾನೆಯ ದಂತ ನಾಪತ್ತೆಯಾಗಿರುವ ಗಂಭೀರ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (PCCF) ಈ ಕುರಿತು ತುರ್ತು ನಿರ್ದೇಶನ ನೀಡಿರುವ ಸಚಿವರು, ಘಟನೆಗಳ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶದ ಆಳವಾದ ಅರಣ್ಯ ಭಾಗದಲ್ಲಿಯೇ ಇಂತಹ ಕೃತ್ಯಗಳು ನಡೆದಿರುವುದು ಇಲಾಖೆಯ ಗಸ್ತು ವ್ಯವಸ್ಥೆ ಮತ್ತು ವನ್ಯಜೀವಿಗಳ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ ಎಂದು ಅವರು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಸಚಿವರ ಪ್ರಮುಖ ನಿರ್ದೇಶನಗಳು:

ವೈಜ್ಞಾನಿಕ ತನಿಖೆಗೆ ಸೂಚನೆ: ಹುಲಿ ಸಾವಿನ ನೈಜ ಕಾರಣ, ಅರಣ್ಯದೊಳಗೆ ಉರುಳು ಅಳವಡಿಸಿದ ಕಿಡಿಗೇಡಿಗಳು ಯಾರು ಮತ್ತು ಆನೆಯ ದಂತಗಳು ಹೇಗೆ ನಾಪತ್ತೆಯಾದವು ಎಂಬುದರ ಕುರಿತು ಸಾಕ್ಷ್ಯಾಧಾರಿತ ಹಾಗೂ ವೈಜ್ಞಾನಿಕ ತನಿಖೆ ನಡೆಸಬೇಕು. ಎರಡೂ ಘಟನೆಗಳ ನಡುವೆ ಕಳ್ಳಬೇಟೆಗಾರರ ಜಾಲದ ಕೈವಾಡವಿದೆಯೇ ಎಂಬುದನ್ನು ಮರಣೋತ್ತರ ಪರೀಕ್ಷೆ ಹಾಗೂ ಪ್ರಯೋಗಾಲಯದ ವರದಿಗಳ ಮೂಲಕ ಪತ್ತೆಹಚ್ಚಲು ಸೂಚಿಸಲಾಗಿದೆ.

ಕರ್ತವ್ಯಲೋಪಕ್ಕೆ ಶಿಸ್ತು ಕ್ರಮ: ಘಟನೆ ನಡೆದ ವ್ಯಾಪ್ತಿಯ ಅರಣ್ಯ ವಲಯಾಧಿಕಾರಿಗಳು (RFO), ಉಪ ವಲಯ ಅರಣ್ಯಾಧಿಕಾರಿಗಳು (DRFO) ಹಾಗೂ ಬೀಟ್ ಸಿಬ್ಬಂದಿಯ ಗಸ್ತು ಪುಸ್ತಕ ಮತ್ತು ದಾಖಲೆಗಳನ್ನು ಪರಿಶೀಲಿಸಬೇಕು. ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ಅಥವಾ ಕರ್ತವ್ಯಲೋಪ ಕಂಡುಬಂದಲ್ಲಿ ತಕ್ಷಣವೇ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಅಧಿಕಾರಿಗಳಿಗೆ ಕಡ್ಡಾಯ ಕ್ಷೇತ್ರ ಪರಿಶೀಲನೆ: ರಾಜ್ಯದ ಎಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (DCF) ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು (ACF) ಕಚೇರಿಗಳಿಗಷ್ಟೇ ಸೀಮಿತವಾಗದೆ, ಇಂದಿನಿಂದಲೇ ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಅರಣ್ಯ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಗಸ್ತು ವ್ಯವಸ್ಥೆ ಹಾಗೂ ವನ್ಯಜೀವಿಗಳ ರಕ್ಷಣಾ ಕ್ರಮಗಳನ್ನು ಪರಿಶೀಲಿಸಬೇಕು.

ಭದ್ರತೆ ಬಲಪಡಿಸಲು ಸೂಚನೆ: ಕಳ್ಳಬೇಟೆ, ಉರುಳು ಅಳವಡಿಕೆ ಹಾಗೂ ವನ್ಯಜೀವಿ ಅಂಗಾಂಗಗಳ ಅಕ್ರಮ ಸಾಗಣೆಯನ್ನು ತಡೆಯಲು ತಾಂತ್ರಿಕ ನಿಗಾ ವ್ಯವಸ್ಥೆ ಮತ್ತು ಸ್ಥಳೀಯ ಮಾಹಿತಿ ಸಂಗ್ರಹ ಜಾಲವನ್ನು ಬಲಪಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈಗಾಗಲೇ ರಚನೆಯಾಗಿರುವ ವಿಶೇಷ ತನಿಖಾ ತಂಡದ ಪ್ರಗತಿ ಹಾಗೂ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳನ್ನೊಳಗೊಂಡ ಸಮಗ್ರ ವಿವರವಾದ ವರದಿಯನ್ನು ನಿಗದಿತ ಕಾಲಮಿತಿಯೊಳಗೆ ಸಲ್ಲಿಸುವಂತೆ ಸಚಿವರು ಆದೇಶಿಸಿದ್ದಾರೆ.

 

 


Share this with Friends

Related Post