ಹಾಸನ:”ರಾಜ್ಯದಲ್ಲಿ ಸದಾ ಕಾಲ ನನ್ನ ವಿರುದ್ಧ ದಾಳಿ ನಡೆಸಲು ಮತ್ತು ನನ್ನನ್ನು ಪ್ರಚೋದಿಸಲು ಮುಖ್ಯಮಂತ್ರಿಗಳೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸುಪಾರಿ ಕೊಟ್ಟಂತಿದೆ” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, “2028ರಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಆಗ ನನ್ನ ಇನ್ನೊಂದು ಮುಖ ಏನೆಂಬುದನ್ನು ಇವರಿಗೆ ತೋರಿಸುತ್ತೇನೆ” ಎಂದು ಅವರು ಕಟುವಾಗಿ ಎಚ್ಚರಿಸಿದ್ದಾರೆ.
ಹಾಸನದ ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣ ಹಾಗೂ ಕೆಪಿಎಸ್ಸಿ ಹಗರಣದ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದರು.
‘ಬ್ಲ್ಯಾಕ್ಮೇಲರ್ಗೆ ಸರ್ಕಾರ ಶರಣಾಗಿದೆ’:
ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಮಾತನಾಡಿದ ಕುಮಾರಸ್ವಾಮಿ, “ನಾನೇ ಈ ಕೆಲಸ ಮಾಡಿದ್ದು ಎಂದು ಅಪರಾಧಿಯೇ ಒಪ್ಪಿಕೊಂಡಿದ್ದರೂ ಅವನನ್ನು ಮುಟ್ಟುವ ಧೈರ್ಯ ಈ ಗೃಹ ಮಂತ್ರಿಗೆ ಇಲ್ಲ. ಇಡೀ ವ್ಯವಸ್ಥೆಯನ್ನು ಬ್ಲ್ಯಾಕ್ಮೇಲ್ ಮಾಡುತ್ತಿರುವ ದುಷ್ಟನಿಗೆ ರಾಜ್ಯ ಸರ್ಕಾರ ಶರಣಾಗಿದೆ. ನನಗಿರುವ ಮಾಹಿತಿ ಪ್ರಕಾರ, ಆ ವ್ಯಕ್ತಿ ಸುಮಾರು 100 ರಿಂದ 150 ಪೊಲೀಸ್ ಅಧಿಕಾರಿಗಳನ್ನು ಸ್ಟಿಂಗ್ ಮಾಡಿ ವಿಡಿಯೋ ಇಟ್ಟುಕೊಂಡಿದ್ದಾನೆ. ಇದೇ ಕಾರಣಕ್ಕೆ ಇಡೀ ಪೊಲೀಸ್ ಇಲಾಖೆ ಅವನನ್ನು ನೋಡಿ ನಡುಗುತ್ತಿದೆ. ಇಲಾಖೆಯನ್ನು ಅವನಿಗೆ ಒತ್ತೆ ಇಡಲಾಗಿದೆಯೇ?” ಎಂದು ಖಾರವಾಗಿ ಪ್ರಶ್ನಿಸಿದರು.
ಮುಂದುವರಿದು, “ಈ ಹಿಂದೆ ಸಿದ್ದರಾಮಯ್ಯ ಸಂಪುಟದ ಸಚಿವರಾದ ಕೆ.ಎನ್. ರಾಜಣ್ಣ ಅವರ ವಿರುದ್ಧವೇ ಟ್ರ್ಯಾಪ್ ಮಾಡಲು ಯತ್ನ ನಡೆದಿತ್ತು ಎಂದು ಸ್ವತಃ ರಾಜಣ್ಣ ಅವರೇ ಸದನದಲ್ಲಿ ಹೇಳಿದ್ದರು. ಆಗ ಪ್ರಿಯಾಂಕ್ ಖರ್ಗೆ ಅವರು ಕಣ್ಣು-ಕಿವಿ ಮುಚ್ಚಿ ಕುಳಿತಿದ್ದರೇ? ರಮೇಶ್ ಜಾರಕಿಹೊಳಿ ವಿರುದ್ಧ ಸಂಚು ರೂಪಿಸಿದವರು ಯಾರು?” ಎಂದು ಪ್ರಶ್ನೆಗಳ ಸುರಿಮಳೆಗೈದರು.
ಸಿದ್ದರಾಮಯ್ಯ ಮೌನಕ್ಕೆ ಅಚ್ಚರಿ:
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಇವರೆಲ್ಲ ಸೇರಿಕೊಂಡು ಇಂತಹ ಕಿರಾತಕರನ್ನು ಜೊತೆಯಲ್ಲಿಟ್ಟುಕೊಂಡಿದ್ದರು. ಸಿದ್ದರಾಮಯ್ಯ ಅವರು ಇಲ್ಲದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಎಂದೋ ಮುಗಿದುಹೋಗುತ್ತಿತ್ತು. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಸಿದ್ದರಾಮಯ್ಯ ಅವರು ಮೌನಕ್ಕೆ ಶರಣಾಗಿರುವುದು ನನಗೆ ಅಚ್ಚರಿ ಮೂಡಿಸಿದೆ” ಎಂದರು. ಗೃಹ ಸಚಿವರು ತಮ್ಮನ್ನು ‘ಉತ್ತರ ಕುಮಾರ’ ಎಂದು ಕರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದ ಕೆಪಿಎಸ್ಸಿ ಹಗರಣದ ಬಗ್ಗೆ ತಾವು ದಾಖಲೆ ಬಿಡುಗಡೆ ಮಾಡಿದರೂ ಖರ್ಗೆ ಅವರು ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.
ಕುಟುಂಬ ಮುಗಿಸುವ ಸಂಚು:
“ಹಿಂದೆ ನಾನು ಮೊದಲ ಬಾರಿ ಸಿಎಂ ಆಗಿದ್ದಾಗಲೂ ನನ್ನ ವಿರುದ್ಧ 150 ಕೋಟಿ ರೂ.ಗಳ ಗಣಿ ಲಂಚದ ಸುಳ್ಳು ಆರೋಪ ಮಾಡಿಸಲಾಗಿತ್ತು. ಈಗಲೂ ನಮ್ಮ ಇಡೀ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಲಾಗುತ್ತಿದೆ. ಆದರೆ ನಾನು ಏಕಾಂಗಿಯಾಗಿ ಹೋರಾಡುತ್ತಿದ್ದೇನೆ. ಹಾಸನಾಂಬೆಯ ಆಶೀರ್ವಾದ ನಮ್ಮ ಮೇಲಿದೆ. ಇವರ ಅಕ್ರಮಗಳಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಕುಮಾರಸ್ವಾಮಿ ಗುಡುಗಿದರು.
ಪೊಲೀಸ್ ತನಿಖೆಗೆ ಅಸಮಾಧಾನ: ನಿನ್ನೆ ಡಿಜಿಪಿಯವರನ್ನು ಭೇಟಿ ಮಾಡಿ ಸ್ಟಿಂಗ್ ಆರೋಪಿಗಳ ವಿರುದ್ಧ ದೂರು ನೀಡಲಾಗಿತ್ತು. ಆದರೆ ಅಲ್ಲಿನ ಅಧಿಕಾರಿಗಳ ಮುಖಭಾವ ನೋಡಿದರೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಸವಾಲಿಗೆ ತಿರುಗೇಟು: ತಮ್ಮನ್ನು ರಾಜಕೀಯವಾಗಿ ಎದುರಿಸಲಾಗದೆ ಗೃಹ ಸಚಿವರು ಕೇವಲ ಗಂಟಲು ದೊಡ್ಡದು ಮಾಡಿ ಕೂಗಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

