Sun. Oct 18th, 2026

ಪಿಂಚಣಿ ನೀಡಲು ಯೋಗ್ಯತೆ ಇಲ್ಲದ ಸರ್ಕಾರ ವಿಕಲಚೇತನರನ್ನು ತಡೆಯಲು ಪೊಲೀಸರನ್ನು ಬಳಸುತ್ತಿದೆ: ಆರ್. ಅಶೋಕ್ ವಾಗ್ದಾಳಿ!

Share this with Friends

ಬೆಂಗಳೂರು:”ಕಳೆದ ಐದು ತಿಂಗಳಿಂದ ವಿಕಲಚೇತನರಿಗೆ ಪಿಂಚಣಿ ನೀಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರ, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವವರನ್ನು ಬಂಧಿಸಲು ಸಾವಿರಾರು ಪೊಲೀಸರನ್ನು ನಿಯೋಜಿಸಿದೆ” ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಜರುಗಿದ ವಿಕಲಚೇತನರ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಂಬರದ ನೀತಿಗಳು ಮತ್ತು ಆರ್ಥಿಕ ವೈಫಲ್ಯಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿಕಲಚೇತನರು ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಇತ್ತ ಗಮನಹರಿಸದೆ ಮೌನಕ್ಕೆ ಶರಣಾಗಿದೆ ಎಂದು ಟೀಕಿಸಿದರು.

‘ಖಜಾನೆ ಖಾಲಿಯಾಗಿದೆ ಎಂದು ಬೋರ್ಡ್ ಹಾಕಿಕೊಳ್ಳಲಿ’:

ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅಶೋಕ್, “ಸರ್ಕಾರಿ ಕಚೇರಿಗಳಲ್ಲಿ ವಿಕಲಚೇತನರನ್ನು ಕೇವಲ ಹತ್ತು ಸಾವಿರ ರೂಪಾಯಿಗಳ ಅಲ್ಪ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ಅವರಿಗೆ ನೀಡಬೇಕಾದ ಪಿಂಚಣಿಯನ್ನೂ ತಡೆಹಿಡಿಯಲಾಗಿದೆ. ಹಣ ನೀಡಲು ಸಾಧ್ಯವಾಗದಿದ್ದರೆ ಸರ್ಕಾರಿ ಖಜಾನೆ ಖಾಲಿಯಾಗಿದೆ, ನಾವು ದಿವಾಳಿಯಾಗಿದ್ದೇವೆ ಎಂದು ಮುಖ್ಯಮಂತ್ರಿಗಳು ಬಹಿರಂಗವಾಗಿ ಘೋಷಿಸಲಿ ಅಥವಾ ಕಚೇರಿಗಳ ಮುಂದೆ ಫಲಕ ಹಾಕಿಕೊಳ್ಳಲಿ” ಎಂದು ಲೇವಡಿ ಮಾಡಿದರು.

“ಪ್ರತಿಭಟನಾನಿರತರನ್ನು ಹತ್ತಿಕ್ಕಲು ಸಾವಿರಕ್ಕೂ ಹೆಚ್ಚು ಪೊಲೀಸರು ಮತ್ತು 40ಕ್ಕೂ ಹೆಚ್ಚು ಬಸ್‌ಗಳನ್ನು ನಿಯೋಜಿಸಲಾಗಿದೆ. ಇಷ್ಟೊಂದು ಭದ್ರತೆಯನ್ನು ಗಡಿಯಲ್ಲಿ ಭಯೋತ್ಪಾದಕರು ಅಥವಾ ಬಾಂಗ್ಲಾದೇಶದ ಅಕ್ರಮ ನುಸುಳುಕೋರರನ್ನು ತಡೆಯಲು ಬಳಸಬೇಕಿತ್ತೇ ವಿನಃ ಅಸಹಾಯಕ ವಿಕಲಚೇತನರ ಮೇಲಲ್ಲ. ಪೊಲೀಸರು ವಿಕಲಚೇತನರನ್ನು ಬಲವಂತವಾಗಿ ಹೊತ್ತೊಯ್ಯುವ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾದರೆ ಇಡೀ ದೇಶದ ಮುಂದೆ ಸರ್ಕಾರದ ಮಾನ ಹರಾಜಾಗಲಿದೆ” ಎಂದು ಎಚ್ಚರಿಸಿದರು.

ವಿಧಾನಸೌಧ ಮುತ್ತಿಗೆಗೆ ಕರೆ:

ಸರ್ಕಾರ ಎಷ್ಟೇ ಲಾಠಿ ಚಾರ್ಜ್ ಅಥವಾ ಕಠಿಣ ಕ್ರಮಗಳನ್ನು ಕೈಗೊಂಡರೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಾವಿರಾರು ವಿಕಲಚೇತನರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು ನಿಶ್ಚಿತ ಎಂದು ಅಶೋಕ್ ತಿಳಿಸಿದರು. “ಒಂದೆಡೆ ಬಿಡದಿ ಮತ್ತು ಆನೇಕಲ್ ಭಾಗದಲ್ಲಿ ರೈತರ ಜಮೀನುಗಳನ್ನು ಲೂಟಿ ಮಾಡಲಾಗುತ್ತಿದೆ, ಇನ್ನೊಂದೆಡೆ ಸಚಿವರಾಗಿದ್ದವರು ವಾಲ್ಮೀಕಿ ನಿಗಮದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಸರ್ಕಾರ ನೀಡಿದ 2,500 ರೂ.ಗಳ ಅಲ್ಪ ಬರ ಪರಿಹಾರವನ್ನು ರೈತರೇ ವಾಪಸ್ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿಕಲಚೇತನರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ” ಎಂದು ಅವರು ಸ್ಪಷ್ಟಪಡಿಸಿದರು.

 

 

 


Share this with Friends

Related Post