Tue. Oct 20th, 2026

ಹಬ್ಬದ ಪ್ರಯಾಣಿಕರ ದಟ್ಟಣೆ ನಿವಾರಣೆ: ಮೈಸೂರು ಮತ್ತು ಹುಬ್ಬಳ್ಳಿಯಿಂದ ಝಾನ್ಸಿಗೆ ಒನ್-ವೇ ವಿಶೇಷ ರೈಲುಗಳ ಸಂಚಾರ

Share this with Friends

ಮೈಸೂರು/ಹುಬ್ಬಳ್ಳಿ: ದೀಪಾವಳಿ ಹಬ್ಬದ ಪ್ರಯಾಣಿಕರ ಭಾರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ನೈಋತ್ಯ ರೈಲ್ವೆಯು (South Western Railway) ಮೈಸೂರು ಹಾಗೂ ಹುಬ್ಬಳ್ಳಿಯಿಂದ ಉತ್ತರ ಪ್ರದೇಶದ ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ ಜಂಕ್ಷನ್‌ಗೆ ತಲಾ ಒಂದು ಒನ್-ವೇ (ಏಕಮುಖ) ಎಕ್ಸ್‌ಪ್ರೆಸ್ ವಿಶೇಷ ರೈಲುಗಳ ಸಂಚಾರವನ್ನು ಘೋಷಿಸಿದೆ.

1. ಮೈಸೂರು – ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ ಜಂಕ್ಷನ್ ವಿಶೇಷ ರೈಲು (ರೈಲು ಸಂಖ್ಯೆ: 06275)

ಈ ವಿಶೇಷ ರೈಲು ಅಕ್ಟೋಬರ್ 21, 2026ರ ಬುಧವಾರ ಸಂಜೆ 17:05 ಗಂಟೆಗೆ ಮೈಸೂರಿನಿಂದ ಹೊರಟು, ಅಕ್ಟೋಬರ್ 23ರ ಶುಕ್ರವಾರ ಬೆಳಗ್ಗೆ 10:00 ಗಂಟೆಗೆ ಝಾನ್ಸಿ ಜಂಕ್ಷನ್ ತಲುಪಲಿದೆ.

ನಿಲ್ದಾಣಗಳು: ಈ ರೈಲು ಪ್ರಯಾಣದ ಮಧ್ಯೆ ಕೆಎಸ್ಆರ್ ಬೆಂಗಳೂರು, ಧರ್ಮಾವರಂ ಜಂಕ್ಷನ್, ಸಿಕಂದರಾಬಾದ್ ಜಂಕ್ಷನ್, ಕಾಜಿಪೇಟ್ ಜಂಕ್ಷನ್, ಬಲ್ಹಾರ್ಷಾ, ನಾಗ್ಪುರ ಜಂಕ್ಷನ್, ಇಟಾರ್ಸಿ ಜಂಕ್ಷನ್, ಭೋಪಾಲ್ ಜಂಕ್ಷನ್ ಮತ್ತು ಬಿನಾ ಜಂಕ್ಷನ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಬೋಗಿಗಳ ವಿವರ: ಈ ರೈಲು ಒಟ್ಟು 20 ಬೋಗಿಗಳನ್ನು ಹೊಂದಿದ್ದು, ಇದರಲ್ಲಿ 12 ಜನರಲ್ ಸೆಕೆಂಡ್ ಕ್ಲಾಸ್ ಸ್ಲೀಪರ್, 6 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಎಸ್‌ಎಲ್‌ಆರ್‌ಡಿ (SLRD) ಬೋಗಿಗಳು ಇರಲಿವೆ ಎಂದು ಮೈಸೂರು ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಗಿರೀಶ್ ಧರ್ಮರಾಜ್ ಕಾಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2. ಹುಬ್ಬಳ್ಳಿ – ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ ಜಂಕ್ಷನ್ ವಿಶೇಷ ರೈಲು (ರೈಲು ಸಂಖ್ಯೆ: 07349)

ಈ ವಿಶೇಷ ರೈಲು ಅಕ್ಟೋಬರ್ 22, 2026ರ ಗುರುವಾರ ರಾತ್ರಿ 23:50 ಗಂಟೆಗೆ ಹುಬ್ಬಳ್ಳಿಯಿಂದ (UBL) ಹೊರಟು, ಪ್ರಯಾಣದ ಮೂರನೇ ದಿನದಂದು ಬೆಳಗ್ಗೆ 06:30 ಗಂಟೆಗೆ ಝಾನ್ಸಿ ಜಂಕ್ಷನ್ (VGLJ) ತಲುಪಲಿದೆ.

ನಿಲ್ದಾಣಗಳು: ಮಾರ್ಗಮಧ್ಯೆ ಈ ರೈಲು ಗದಗ್, ಬಾದಾಮಿ, ಬಾಗಲಕೋಟೆ, ವಿಜಯಪುರ, ಸೋಲಾಪುರ, ದೌಂಡ್, ಕೊಪರ್​ಗಾಂವ್, ಮನ್ಮಾಡ್, ಭುಸಾವಲ್, ಖಾಂಡ್ವಾ, ಇಟಾರ್ಸಿ, ರಾಣಿ ಕಮಲಾಪತಿ ಮತ್ತು ಬಿನಾ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಬೋಗಿಗಳ ವಿವರ: ಈ ರೈಲು ಒಟ್ಟು 20 ಬೋಗಿಗಳನ್ನು ಹೊಂದಿರಲಿದ್ದು, 10 ಸ್ಲೀಪರ್ ಬೋಗಿಗಳು, 8 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಮತ್ತು ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್ ಒಳಗೊಂಡ 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಇರಲಿವೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

 


Share this with Friends

Related Post