Tue. Oct 20th, 2026

ಕನ್ನಡಿಗರ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್; ಕರವೇ ಹೋರಾಟ ವಾಪಸ್

Share this with Friends

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಹಿಂದೆ ಆಡಿದ್ದ ಮಾತು ಕನ್ನಡಿಗರ ಮನಸ್ಸಿಗೆ ತಂದಿದ್ದ ನೋವನ್ನು ಅರಿತುಕೊಂಡು ಬೇಷರತ್ತಾಗಿ ಕ್ಷಮೆಯಾಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಎಲ್ಲಾ ರೀತಿಯ ಪ್ರತಿಭಟನೆ ಹಾಗೂ ಆಕ್ರೋಶದ ಹೋರಾಟಗಳನ್ನು ಇಲ್ಲಿಗೇ ಕೈಬಿಡುತ್ತಿರುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಪ್ರಕಟಿಸಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಗಾಯಕ ಸೋನು ನಿಗಮ್ ಇಂದು ನನ್ನೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ತಾವು ಹಿಂದೆ ಆಡಿದ್ದ ಮಾತು ಕನ್ನಡಿಗರನ್ನು ಹೇಗೆ ನೋಯಿಸಿದೆ ಎಂಬುದು ತಮಗೆ ಅರ್ಥವಾಗಿದೆ ಎಂದು ತಿಳಿಸಿ, ಬೇಷರತ್ತಾಗಿ ಕ್ಷಮೆ ಕೇಳಿದ್ದಾರೆ” ಎಂದು ಹೇಳಿದ್ದಾರೆ.

ವೈಯಕ್ತಿಕ ದ್ವೇಷವಿರಲಿಲ್ಲ:

ಸೋನು ನಿಗಮ್ ಅವರ ಗಾಯನವನ್ನು ನಾವೆಲ್ಲರೂ ಇಷ್ಟಪಡುತ್ತೇವೆ. ಅವರ ಮೇಲೆ ನಮಗೆ ವೈಯಕ್ತಿಕವಾಗಿ ಯಾವುದೇ ದ್ವೇಷ ಅಥವಾ ಮುನಿಸು ಇರಲಿಲ್ಲ. ಆದರೆ ಅವರು ಆಡಿದ್ದ ಆ ಒಂದು ಮಾತನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಕಾರಣ ಕನ್ನಡಿಗರ ಪ್ರತಿಭಟನೆ ಮತ್ತು ಆಕ್ರೋಶ ಸಹಜವಾಗಿ ವ್ಯಕ್ತವಾಗಿತ್ತು. ಇದೀಗ ಅವರು ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿರುವುದರಿಂದ ಈ ವಿವಾದವನ್ನು ಇಲ್ಲಿಗೇ ಮುಗಿಸುವುದು ಸೂಕ್ತ. ತಪ್ಪು ಒಪ್ಪಿಕೊಂಡು ಕ್ಷಮೆ ಯಾಚಿಸಿದವರನ್ನು ಮನ್ನಿಸುವುದು ಕನ್ನಡಿಗರ ಉದಾರ ಗುಣ ಮತ್ತು ಸಂಸ್ಕಾರವಾಗಿದೆ ಎಂದು ನಾರಾಯಣಗೌಡ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಸಂಗೀತ ಶ್ರೀಮಂತಗೊಳಿಸಿದ ಪರಭಾಷಿಗರು:

ಘಂಟಸಾಲ, ಪಿ.ಬಿ. ಶ್ರೀನಿವಾಸ್, ಕೆ.ಜೆ. ಯೇಸುದಾಸ್, ಎಸ್. ಜಾನಕಿ, ವಾಣಿ ಜಯರಾಮ್ ಹಾಗೂ ಕೆ.ಎಸ್. ಚಿತ್ರಾ ಅವರಂತಹ ಅದ್ಭುತ ಗಾಯಕರು ಕನ್ನಡಿಗರಲ್ಲದಿದ್ದರೂ ಸಹ, ನಮ್ಮ ಚಿತ್ರಸಂಗೀತವನ್ನು ಶ್ರೀಮಂತಗೊಳಿಸಿದ್ದಕ್ಕಾಗಿ ಕನ್ನಡಿಗರು ಅವರನ್ನು ಅಪಾರವಾಗಿ ಪ್ರೀತಿಸಿದ್ದಾರೆ ಮತ್ತು ಗೌರವಿಸಿದ್ದಾರೆ. ಆ ಕೃತಜ್ಞತೆ ಕನ್ನಡಿಗರಲ್ಲಿ ಸದಾ ಇರಲಿದೆ. ಸೋನು ನಿಗಮ್ ಕೂಡ ಅದೇ ಸಾಲಿನ ಪ್ರಮುಖ ಗಾಯಕರಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಈ ಕಹಿ ಘಟನೆಯನ್ನು ಮರೆತು ಕರವೇ ತನ್ನ ಹೋರಾಟವನ್ನು ನಿಲ್ಲಿಸುತ್ತಿದೆ. ಇದು ಎಲ್ಲರಿಗೂ ಒಂದು ಪಾಠವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾವು ವೈಯಕ್ತಿಕವಾಗಿ ಸಂಗೀತ ಪ್ರೇಮಿಯಾಗಿದ್ದು, ಸೋನು ನಿಗಮ್ ಅವರು ಮುಂಬರುವ ದಿನಗಳಲ್ಲಿ ಇನ್ನಷ್ಟು ಕನ್ನಡ ಗೀತೆಗಳನ್ನು ಹಾಡಲಿ ಹಾಗೂ ಕರ್ನಾಟಕದ ನೆಲದಲ್ಲಿ ಅವರ ಸಂಗೀತ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಆಶಿಸುವುದಾಗಿ ನಾರಾಯಣಗೌಡ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 

 


Share this with Friends

Related Post