Wed. Oct 21st, 2026

ವಿಶ್ವವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಸ್ಯಾಂಡಲ್‌ವುಡ್ ತಾರೆಗಳ ಮೆರುಗು

Share this with Friends

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೆ ಈ ಬಾರಿ ಕನ್ನಡ ಚಿತ್ರರಂಗದ ತಾರಾ ದಂಡು ವಿಶೇಷ ಕಳೆ ನೀಡಿದೆ. ಮುಖ್ಯಮಂತ್ರಿಗಳ ವಿಶೇಷ ಆಹ್ವಾನದ ಮೇರೆಗೆ ಸ್ಯಾಂಡಲ್‌ವುಡ್‌ನ ಪ್ರಮುಖ ನಟ-ನಟಿಯರು, ತಾಂತ್ರಿಕ ವಲಯದ ಗಣ್ಯರು ಒಟ್ಟಾಗಿ ಆಗಮಿಸಿ ಮೈಸೂರು ಅರಮನೆ ಆವರಣದಲ್ಲಿ ನಡೆದ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದರು.

ಕಲಾವಿದರ ಪತ್ರಿಕಾ ವೀಕ್ಷಣೆ ಹಾಗೂ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಸರ್ಕಾರವು ವಿಶೇಷ ತೆರೆದ ‘ಅಂಬಾರಿ ಬಸ್’ ವ್ಯವಸ್ಥೆಯನ್ನು ಕಲ್ಪಿಸಿತ್ತು.

ಮೆರವಣಿಗೆಯಲ್ಲಿ ಭಾಗವಹಿಸಿದ ಪ್ರಮುಖರು:

ಕನ್ನಡ ಚಿತ್ರರಂಗದ ಹಿರಿಯ ನಟ ‘ಕ್ರೇಜಿ ಸ್ಟಾರ್’ ವಿ. ರವಿಚಂದ್ರನ್, ನಟರಾದ ರಮೇಶ್ ಅರವಿಂದ್, ‘ಗೋಲ್ಡನ್ ಸ್ಟಾರ್’ ಗಣೇಶ್, ‘ದುನಿಯಾ’ ವಿಜಯ್, ಶರಣ್, ಹಿರಿಯ ನಟ ದೇವರಾಜ್, ಅಜಯ್ ರಾವ್, ವಸಿಷ್ಠ ಸಿಂಹ, ನಿರ್ದೇಶಕ ತರುಣ್ ಸುಧೀರ್, ಚಿತ್ರರಂಗದ ಮುಖಂಡ ಸಾ.ರಾ. ಗೋವಿಂದು, ಹಿರಿಯ ನಟಿಯರಾದ ಜಯಮಾಲಾ, ಶ್ರುತಿ ಹಾಗೂ ನಟಿಯರಾದ ರಾಗಿಣಿ ದ್ವಿವೇದಿ, ಸೋನಾಲ್ ಮೊಂಥೆರೋ ಸೇರಿದಂತೆ ಹಲವು ತಾರೆಗಳು ಈ ಐತಿಹಾಸಿಕ ಸಂಭ್ರಮವನ್ನು ಕಣ್ಣುಂಬಿಕೊಂಡರು. ಇದೇ ವೇಳೆ ಕನ್ನಡ ಚಿತ್ರರಂಗದ ಇತಿಹಾಸವನ್ನು ಸಾರುವ ವಿಶೇಷ ಸ್ತಬ್ಧಚಿತ್ರವೂ ಮೆರವಣಿಗೆಯಲ್ಲಿ ಸಾಗಿ ಗಮನ ಸೆಳೆಯಿತು.

ಭಾವಪರವಶರಾದ ತಾರೆಗಳು: ಮಾಧ್ಯಮಗಳೊಂದಿಗೆ ಅನಿಸಿಕೆ ಹಂಚಿಕೆ

ಕುಟುಂಬ, ನೆನಪುಗಳನ್ನು ನೆನೆದ ರವಿಚಂದ್ರನ್:
ಮಾಧ್ಯಮಗಳೊಂದಿಗೆ ಮಾತನಾಡಿದ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರು ಅತ್ಯಂತ ಭಾವುಕರಾಗಿ ಕಂಡುಬಂದರು. ತಮ್ಮ ಹಳೆಯ ದಿನಗಳು, ತಂದೆ-ತಾಯಿಯ ನೆನಪುಗಳನ್ನು ಮೆಲುಕು ಹಾಕಿದ ಅವರು, ಮೈಸೂರು ದಸರಾ ನಮ್ಮ ನಾಡಿನ ಪರಂಪರೆಯ ಪ್ರತೀಕ. ಇಂತಹ ಸಾಂಸ್ಕೃತಿಕ ವೈಭವದ ಭಾಗವಾಗಲು ಹೆಮ್ಮೆಯೆನಿಸುತ್ತದೆ ಎಂದು ಸಾಂಪ್ರದಾಯಿಕ ಆಚರಣೆಯ ಮಹತ್ವವನ್ನು ಶ್ಲಾಘಿಸಿದರು.

ರವಿಮಾಮನಿಗೆ ಮುತ್ತಿಕ್ಕಿದ ಗಣೇಶ್!:
‘ಗೋಲ್ಡನ್ ಸ್ಟಾರ್’ ಗಣೇಶ್ ಮಾತನಾಡಿ, ಇಡೀ ಚಿತ್ರರಂಗವೇ ಒಂದೆಡೆ ಸೇರಿ ನಾಡಹಬ್ಬವನ್ನು ಸಂಭ್ರಮಿಸುತ್ತಿರುವುದು ದಸರಾದ ರಂಗನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ಇದೇ ವೇಳೆ ಮಾಧ್ಯಮಗಳ ಮುಂದೆಯೇ ತಮ್ಮ ನೆಚ್ಚಿನ ಹಿರಿಯ ನಟ ರವಿಚಂದ್ರನ್ ಅವರಿಗೆ ಪ್ರೀತಿಯಿಂದ ಮುತ್ತು ನೀಡಿ ಸ್ಯಾಂಡಲ್‌ವುಡ್‌ನ ಒಗ್ಗಟ್ಟನ್ನು ಪ್ರದರ್ಶಿಸಿದರು.

ಒಂದೇ ವೇದಿಕೆಯಲ್ಲಿ ಇಡೀ ಚಿತ್ರರಂಗ:
ನಟ ರಮೇಶ್ ಅರವಿಂದ್ ಹಾಗೂ ಹಿರಿಯ ನಟಿ ಶ್ರುತಿ ಮಾತನಾಡಿ, ಕರ್ನಾಟಕದ ಅತ್ಯಂತ ದೊಡ್ಡ ಸಾಂಸ್ಕೃತಿಕ ಉತ್ಸವದಲ್ಲಿ ಇಡೀ ಚಿತ್ರರಂಗ ಒಟ್ಟಾಗಿ ಭಾಗವಹಿಸುತ್ತಿರುವುದು ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ಹೆಮ್ಮೆಯ ಕ್ಷಣ. ಜಂಬೂ ಸವಾರಿಯ ಈ ಭವ್ಯ ಜನಸಾಗರ ಮತ್ತು ಸಾಂಪ್ರದಾಯಿಕ ವೈಭವವನ್ನು ಕಣ್ಣಾರೆ ನೋಡುವುದೇ ಒಂದು ಸೌಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.

 


Share this with Friends

Related Post