ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ದಿನವಾದ ಇಂದು ಐತಿಹಾಸಿಕ ಅಂಬಾವಿಲಾಸ ಅರಮನೆಯಲ್ಲಿ ರಾಜಪರಂಪರೆಯ ಧಾರ್ಮಿಕ ವಿಧಿವಿಧಾನಗಳು ಅತ್ಯಂತ ಶ್ರದ್ಧಾಭಕ್ತಿ ಹಾಗೂ ವೈಭವದಿಂದ ನೆರವೇರಿದವು. ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಗಾಂಭೀರ್ಯದೊಂದಿಗೆ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಅರಮನೆಯ ಪಂಚಾಂಗದ ಅನ್ವಯ ನಿಗದಿಪಡಿಸಲಾಗಿದ್ದ ಶುಭ ಮುಹೂರ್ತದಲ್ಲಿ ರಾಜಮನೆತನದ ವಿಜಯದಶಮಿ ಆಚರಣೆಗಳು ಆರಂಭಗೊಂಡವು.
ಉತ್ತರ ಪೂಜೆ
ವಿಜಯದಶಮಿ ಧಾರ್ಮಿಕ ವಿಧಿವಿಧಾನಗಳ ಅಂಗವಾಗಿ ಇಂದು ಬೆಳಗ್ಗೆ ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಹಾಗೂ ದಸರಾ ದೀಕ್ಷೆಯ ಅಂಗವಾಗಿ ಧರಿಸಿದ್ದ ಕಂಕಣಕ್ಕೆ ಉತ್ತರ ಪೂಜೆಯನ್ನು ಸಲ್ಲಿಸಲಾಯಿತು.
ಅರಮನೆ ಪಟ್ಟದ ಪ್ರಾಣಿಗಳಿಗೆ ಪೂಜೆ
ವಿಜಯದಶಮಿಯ ಪ್ರಮುಖ ಆಕರ್ಷಣೆಯಾದ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುಗಳನ್ನು ಮಂಗಳ ವಾದ್ಯಗಳೊಂದಿಗೆ ಕರೆತರಲಾಯಿತು. ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಈ ಮಂಗಲ ಪ್ರಾಣಿಗಳಿಗೆ ಶಾಸ್ತ್ರೋಕ್ತವಾಗಿ ವಿಶೇಷ ಪೂಜೆ ನೆರವೇರಿಸಿದರು.
ಯದುವೀರ್ ಒಡೆಯರ್ ನೇತೃತ್ವದ ವಿಜಯಯಾತ್ರೆ ಹಾಗೂ ಶಮಿ ಪೂಜೆ
ಇದಾದ ಬಳಿಕ ರಾಜವಂಶಸ್ಥ ಯದುವೀರ್ ಒಡೆಯರ್ ಅವರು ರಾಜಪೋಷಾಕು ತೊಟ್ಟು, ಕೈಯಲ್ಲಿ ಮೈಸೂರು ಸಂಸ್ಥಾನದ ಪವಿತ್ರ ರಾಜಖಡ್ಗವನ್ನು (ಪಟ್ಟದ ಕತ್ತಿ) ಹಿಡಿದು ಅರಮನೆಯ ಆವರಣದಲ್ಲಿ ಭವ್ಯ ವಿಜಯಯಾತ್ರೆ ಕೈಗೊಂಡರು. ಚಿನ್ನದ ಛತ್ರಿ, ನವಿಲುಗರಿ ಚಾಮರ ಸೇರಿದಂತೆ ಅರಮನೆಯ ಬಿರುದು-ಬಾವಲಿಗಳೊಂದಿಗೆ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಸಾಗಿದ ಅವರು, ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನದ ಆವರಣ ತಲುಪಿದರು. ಅಲ್ಲಿ ವಿಜಯದ ಸಂಕೇತವಾಗಿರುವ ಶಮಿ ವೃಕ್ಷಕ್ಕೆ (ಬನ್ನಿ ಮರ) ವಿಶೇಷ ಶಮಿ ಪೂಜೆ ನೆರವೇರಿಸಿ, ನಾಡಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು.
ರಾಜಮನೆತನದ ಈ ಎಲ್ಲಾ ಧಾರ್ಮಿಕ ಕೈಂಕರ್ಯಗಳ ಸಂದರ್ಭದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್ ಹಾಗೂ ರಾಜಪರಿವಾರದ ಆಪ್ತರು ಉಪಸ್ಥಿತರಿದ್ದರು. ಅರಮನೆಯ ಒಳಗಿನ ಸಾಂಪ್ರದಾಯಿಕ ಪೂಜೆಗಳು ಮುಕ್ತಾಯಗೊಳ್ಳುತ್ತಿದ್ದಂತೆ, ಸಾರ್ವಜನಿಕ ಜಂಬೂ ಸವಾರಿ ಮೆರವಣಿಗೆಗೆ ಅರಮನೆ ಮೈದಾನ ಸಜ್ಜುಗೊಂಡಿತು.

