ನವದೆಹಲಿ: ದೇಶದ ರಾಜಧಾನಿಯಲ್ಲಿ ಕನ್ನಡದ ಕಲೆ, ಸಾಂಸ್ಕೃತಿಕ ಹಿರಿಮೆ ಹಾಗೂ ಚಾರಿತ್ರಿಕ ಇತಿಹಾಸವನ್ನು ಪಸರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ತುಮಕೂರು ಲೋಕಸಭಾ ಕ್ಷೇತ್ರದ ಸಂಸದರೂ ಹಾಗೂ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ದಿನಾಂಕ 23.10.2026 ರಂದು ನವದೆಹಲಿಯ ಸಂಸತ್ತಿನ ಆವರಣದಲ್ಲಿರುವ ಭವ್ಯ ‘ಪ್ರೇರಣಾ ಸ್ಥಳ’ದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡದ ಹೆಮ್ಮೆಯ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ 202ನೇ ವರ್ಷದ ಜನ್ಮ ಜಯಂತಿ ಹಾಗೂ ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ದೆಹಲಿ ಮಟ್ಟದಲ್ಲಿ ಕನ್ನಡತನವನ್ನು ಎತ್ತಿ ಹಿಡಿಯುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ವಿ. ಸೋಮಣ್ಣ ಅವರು, ಕಳೆದ 3 ವರ್ಷಗಳಿಂದ ಸಂಸತ್ ಭವನದಲ್ಲಿ ಜಗದ್ಗುರು ಬಸವೇಶ್ವರ ಹಾಗೂ ರಾಣಿ ಚೆನ್ನಮ್ಮನವರ ಜಯಂತಿಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದಾರೆ.
ದೇಶದ ಪ್ರಮುಖ ನಾಯಕರಿಗೆ ಆಹ್ವಾನ:
ಸಂಸತ್ತಿನ ಆವರಣದಲ್ಲಿ ನಡೆಯಲಿರುವ ಈ ಭವ್ಯ ಪುಷ್ಪಾರ್ಚನೆ ಕಾರ್ಯಕ್ರಮಕ್ಕೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಇದರೊಂದಿಗೆ ಕೇಂದ್ರ ಸಚಿವರುಗಳಾದ ಪ್ರಲ್ಹಾದ್ ಜೋಶಿ, ಹೆಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಸಚಿವ ವಿ. ಸೋಮಣ್ಣ ಅವರು ಖುದ್ದಾಗಿ ಭೇಟಿಯಾಗಿ ಆಮಂತ್ರಿಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ಸ್ಪೀಕರ್ಗೆ ಧನ್ಯವಾದ:
ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹಾಗೂ ನಾಡಿನ ಸಾರ್ವಭೌಮತ್ವಕ್ಕಾಗಿ ಹೋರಾಡಿದ ಕನ್ನಡದ ಮಹನೀಯರನ್ನು ದೆಹಲಿಯಲ್ಲೂ ಪ್ರತಿ ವರ್ಷ ಅತ್ಯಂತ ಗೌರವದಿಂದ ಸ್ಮರಿಸುವ ಕೆಲಸವಾಗುತ್ತಿದೆ ಎಂದು ವಿ. ಸೋಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಸಂಸತ್ತಿನ ಆವರಣದಲ್ಲಿ ಇಂತಹ ಐತಿಹಾಸಿಕ ಆಚರಣೆಗಳಿಗೆ ನಿರಂತರವಾಗಿ ಅವಕಾಶ ಮಾಡಿಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ರಾಜ್ಯದ ಸಮಸ್ತ ಜನತೆಯ ಪರವಾಗಿ ಸಚಿವರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಐತಿಹಾಸಿಕ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಸಾಂಸ್ಕೃತಿಕ ಅಭಿಮಾನಿಗಳು, ವಿವಿಧ ಮಠಗಳ ಮಠಾಧೀಶರುಗಳು ಹಾಗೂ ದೆಹಲಿಯಲ್ಲಿ ನೆಲೆಸಿರುವ ನೂರಾರು ಕನ್ನಡಿಗರು ಆಗಮಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುತ್ತಿರುವ ಲೋಕಸಭೆ ಮತ್ತು ರೇಲ್ವೆ ಸಚಿವಾಲಯದ ಉನ್ನತಾಧಿಕಾರಿಗಳ ಸಹಕಾರವನ್ನು ಸಚಿವರು ಶ್ಲಾಘಿಸಿದ್ದಾರೆ.

