Wed. Oct 21st, 2026

ಇನ್ಮುಂದೆ ಜಂಬೂಸವಾರಿಗೆ ಮುನ್ನ ಆನೆಗಳಿಗೆ 20 ರಿಂದ 30 ದಿನ ತಾಲೀಮು ಕಡ್ಡಾಯ

Share this with Friends

ಬೆಂಗಳೂರು: ಶಿವಮೊಗ್ಗ ದಸರಾ ಜಂಬೂಸವಾರಿ ಮೆರವಣಿಗೆಯ ವೇಳೆ ಚಿನ್ನದ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ಬೆದರಿ ಓಡಿದ ಗಂಭೀರ ಘಟನೆಯ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಅಚಾತುರ್ಯದ ಕುರಿತು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ರಾಮಲಿಂಗ ರೆಡ್ಡಿ ಅವರು ಉನ್ನತಾಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಆತಂಕಕಾರಿ ಘಟನೆಗಳು ಮರುಕಳಿಸದಂತೆ ತಡೆಯಲು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಮುಂದಿನ ವರ್ಷದಿಂದ ಯಾವುದೇ ದಸರಾ ಜಂಬೂಸವಾರಿ ನಡೆಸುವ ಮುನ್ನ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಕನಿಷ್ಠ 20 ದಿನಗಳಿಂದ 1 ತಿಂಗಳವರೆಗೆ (ಅಂದರೆ 30 ದಿನಗಳು) ನುರಿತ ಮಾವುತರು ಹಾಗೂ ಕಾವಾಡಿಗರ ನೇತೃತ್ವದಲ್ಲಿ ಕಡ್ಡಾಯವಾಗಿ ವಿಶೇಷ ತಾಲೀಮು ನಡೆಸುವ ವ್ಯವಸ್ಥೆ ಕಲ್ಪಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ದೂರವಾಣಿ ಮೂಲಕ ವಿವರ ಪಡೆದ ಸಚಿವರು:

ಶಿವಮೊಗ್ಗದಲ್ಲಿ ನಡೆದ ಅವಘಡದ ತೀವ್ರತೆಯನ್ನು ಅರಿತ ಸಚಿವ ರಾಮಲಿಂಗ ರೆಡ್ಡಿ ಅವರು ಶಿವಮೊಗ್ಗ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸುದೀರ್ಘ ಮಾತುಕತೆ ನಡೆಸಿದರು. ಜಂಬೂಸವಾರಿ ವೇಳೆ ಆನೆ ಬೆದರಲು ಕಾರಣವೇನು? ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳಲಾಗಿತ್ತೇ? ಸಾರ್ವಜನಿಕರಿಗೆ ಅಥವಾ ವಾಹನಗಳಿಗೆ ಎಷ್ಟು ಹಾನಿಯಾಗಿದೆ? ಎಂಬಿತ್ಯಾದಿ ವಿಷಯಗಳ ಕುರಿತು ಸಚಿವರು ವಿವರವಾದ ವರದಿ ಕೇಳಿದ್ದಾರೆ.

ಜನಸಂದಣಿ ಮತ್ತು ವಾದ್ಯಗಳ ಸದ್ದಿಗೆ ತರಬೇತಿ ಅಗತ್ಯ:

ದಸರಾದಂತಹ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಉತ್ಸವಗಳಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಮುಂಚಿತವಾಗಿಯೇ ಮಾನಸಿಕ ಹಾಗೂ ದೈಹಿಕ ತರಬೇತಿ ನೀಡುವುದು ಅತ್ಯಗತ್ಯ. ಮುಂದಿನ ದಿನಗಳಲ್ಲಿ ಆನೆಗಳಿಗೆ ನಿರಂತರ ತಾಲೀಮು ನೀಡುವ ಮೂಲಕ ಜನಸಂದಣಿ, ಭಾರಿ ವಾದ್ಯಗಳ ಸದ್ದು, ಪಟಾಕಿ ಅಬ್ಬರ ಹಾಗೂ ಮೆರವಣಿಗೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಅವುಗಳನ್ನು ಸಿದ್ಧಗೊಳಿಸಬೇಕು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ದಸರಾ ಜಂಬೂಸವಾರಿ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಅದು ಜನರ ಭಾವನೆ ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ಮಹತ್ವದ ಆಚರಣೆಯಾಗಿದೆ. ಇಂತಹ ಸಂದರ್ಭದಲ್ಲಿ ಆನೆಗಳು ಬೆದರಿ ಓಡುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸುವುದರ ಜೊತೆಗೆ ಅಪಘಾತಗಳಿಗೆ ಕಾರಣವಾಗಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ಆನೆಗಳ ಆರೋಗ್ಯ, ಮಾನಸಿಕ ಸ್ಥಿತಿ, ಜನಸಂದಣಿ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಪ್ರತಿಯೊಂದು ಆನೆಯ ಸಾಮರ್ಥ್ಯ ಮತ್ತು ಸಿದ್ಧತೆಯನ್ನು ಸಮರ್ಪಕವಾಗಿ ಪರಿಶೀಲಿಸಿದ ಬಳಿಕವೇ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

 

 


Share this with Friends

Related Post