Thu. Oct 22nd, 2026

ರಾಜ್ಯದಲ್ಲಿ ಭೀಕರ ಬರ: 20,585.73 ಕೋಟಿ ರೂ. ತುರ್ತು ನೆರವಿಗಾಗಿ ಕೇಂದ್ರಕ್ಕೆ ಡಾ. ಜಿ. ಪರಮೇಶ್ವರ ಪತ್ರ

Share this with Friends

ಬೆಂಗಳೂರು: ಕರ್ನಾಟಕದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಅಡಿಯಲ್ಲಿ 20,585.73 ಕೋಟಿ ರೂ. ಪರಿಹಾರ ಧನವನ್ನು ತಕ್ಷಣವೇ ಮಂಜೂರು ಮಾಡುವಂತೆ ಕೋರಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕ ಪತ್ರ ಬರೆದು ಶೀಘ್ರ ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.

1956ರ ನಂತರದ 2ನೇ ಅತಿ ಕಡಿಮೆ ಮುಂಗಾರು:

ರಾಜ್ಯದಲ್ಲಿನ ಬರ ಪರಿಸ್ಥಿತಿಯ ಗಂಭೀರತೆಯನ್ನು ಪತ್ರದಲ್ಲಿ ಮನವರಿಕೆ ಮಾಡಿಕೊಟ್ಟಿರುವ ಉಪ ಮುಖ್ಯಮಂತ್ರಿಗಳು, “2026ರ ನೈಋತ್ಯ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ಶೇ.35 ರಷ್ಟು ಮಳೆ ಕೊರತೆಯಾಗಿದೆ. ವಾಡಿಕೆಯ 852 ಮಿ.ಮೀ. ಬದಲಿಗೆ ಕೇವಲ 551 ಮಿ.ಮೀ. ಮಳೆಯಾಗಿದ್ದು, ಇದು 1956ರ ನಂತರ ದಾಖಲಾದ 2ನೇ ಅತ್ಯಂತ ಕಡಿಮೆ ಮುಂಗಾರು ಮಳೆಯಾಗಿದೆ. ರಾಜ್ಯದ ಒಟ್ಟು 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ” ಎಂದು ವಿವರಿಸಿದ್ದಾರೆ.

62,481.88 ಕೋಟಿ ರೂ. ಕೃಷಿ ನಷ್ಟ:

ಬರದಿಂದಾಗಿ ರಾಜ್ಯದ ಒಟ್ಟು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದರಲ್ಲಿ 53.92 ಲಕ್ಷ ಹೆಕ್ಟೇರ್ ಕೃಷಿ ಹಾಗೂ 4.01 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಸೇರಿವೆ. ಒಟ್ಟು ಆರ್ಥಿಕ ನಷ್ಟದ ಅಂದಾಜು 62,481.88 ಕೋಟಿ ರೂ.ಗಳಾಗಿದ್ದು, ರಾಜ್ಯ ಸರ್ಕಾರ ಕೋರಿರುವ 20,585.73 ಕೋಟಿ ರೂ. ಪರಿಹಾರದ ವಿವರ ಈ ಕೆಳಗಿನಂತಿದೆ:

ಬೆಳೆ ಹಾನಿ ಸಹಾಯಧನ (Input Subsidy): 6,128.70 ಕೋಟಿ ರೂ.

ರೈತರ ಜೀವನೋಪಾಯ ಪರಿಹಾರ: 61.91 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ (ದಿನಕ್ಕೆ 327 ರೂ. ನಂತೆ 60 ದಿನಗಳಿಗೆ) ಒಟ್ಟು 12,146.99 ಕೋಟಿ ರೂ.

ಕುಡಿಯುವ ನೀರು ಪೂರೈಕೆ: 1,727 ಕೋಟಿ ರೂ.

ಗೋಶಾಲೆ ಮತ್ತು ಮೇವು ಬ್ಯಾಂಕ್: 583.04 ಕೋಟಿ ರೂ.

ಹಳೇ ದತ್ತಾಂಶ ಕೈಬಿಟ್ಟು ‘ಫ್ರೂಟ್ಸ್’ ಬಳಸಿ:

ಬೆಳೆ ಹಾನಿ ಲೆಕ್ಕ ಹಾಕಲು ಕೇಂದ್ರ ಸರ್ಕಾರ ಇಂದಿಗೂ 2015-16ರ ಹಳೆಯ ಕೃಷಿ ಗಣತಿಯನ್ನು ಬಳಸುತ್ತಿರುವುದಕ್ಕೆ ಡಾ. ಪರಮೇಶ್ವರ ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದ ರಾಜ್ಯಕ್ಕೆ ಸುಮಾರು 1,669.50 ಕೋಟಿ ರೂ. ನೆರವು ನಷ್ಟವಾಗುವ ಸಾಧ್ಯತೆಯಿದೆ. ಆದ್ದರಿಂದ ನಿಖರ ಫಲಾನುಭವಿಗಳನ್ನು ಗುರುತಿಸಲು ಕರ್ನಾಟಕ ಸರ್ಕಾರದ ನವೀಕೃತ ‘ಫ್ರೂಟ್ಸ್’ (FRUITS) ದತ್ತಾಂಶವನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ. ಇದರೊಂದಿಗೆ ಮಕ್ಕಳ ಪೌಷ್ಟಿಕಾಂಶಕ್ಕಾಗಿ ಪಿಎಂ ಪೋಷಣ್ ಯೋಜನೆಯಡಿ ಹೆಚ್ಚುವರಿ ಅನುದಾನಕ್ಕೂ ಬೇಡಿಕೆ ಇಟ್ಟಿದ್ದಾರೆ.

ಅಕ್ಟೋಬರ್ 3 ರಿಂದ 6 ರವರೆಗೆ ಕೇಂದ್ರದ ಅಧ್ಯಯನ ತಂಡ (IMCT) ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದರಿಂದ, ಉನ್ನತ ಮಟ್ಟದ ಸಮಿತಿಯು ತಕ್ಷಣವೇ ವರದಿ ಪರಿಶೀಲಿಸಿ ಸಹಕಾರಿ ಒಕ್ಕೂಟ ವ್ಯವಸ್ಥೆಯ ಆಶಯದಂತೆ ಅನ್ನದಾತರ ರಕ್ಷಣೆಗೆ ಧಾವಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.

 


Share this with Friends

Related Post