Thu. Oct 22nd, 2026

ಬೆಳಗಿನ ಜಾವದ ಗಡಿಬಿಡಿಗೆ ಮುಕ್ತಿ, ಇನ್ಮುಂದೆ ರಾತ್ರಿಯೂ ಬರಲಿದೆ ಕಸದ ಗಾಡಿ! ಬೆಂಗಳೂರು ದಕ್ಷಿಣ ಪಾಲಿಕೆಯ ‘ಸ್ವಚ್ಛ’ ಮಾಸ್ಟರ್ ಪ್ಲಾನ್

Share this with Friends

ಬೆಂಗಳೂರು:ಬೆಳಗ್ಗೆ ಎದ್ದ ತಕ್ಷಣ ಸಿಲಿಕಾನ್ ಸಿಟಿಯ ಬಹುತೇಕ ಮನೆಗಳಲ್ಲಿ ಕೇಳುವ ಸಾಮಾನ್ಯ ಸದ್ದು ಅಂದರೆ ಅದು ಕಸದ ಆಟೋ ಹಾರ್ನ್! ಐಟಿ ಉದ್ಯೋಗಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಗೃಹಿಣಿಯರು ಮುಂಜಾನೆಯ ಅವಸರದಲ್ಲಿ ಕಸ ವಿಲೇವಾರಿ ಮಾಡುವುದು ದೊಡ್ಡ ಸವಾಲಾಗಿತ್ತು. ಬೆಳಗ್ಗೆ ಗಾಡಿ ಮಿಸ್ ಆದ್ರೆ ರಸ್ತೆ ಬದಿಯ ಮೂಲೆಗಳೇ ಕಸದ ರಾಶಿಯಾಗುತ್ತಿದ್ದವು (Blackspots). ಈ ಜ್ವಲಂತ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆಯು ಈಗ ಸದ್ದಿಲ್ಲದೆ ಒಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ.

ಅದೇ ‘ರಾತ್ರಿ ಕಸ ಸಂಗ್ರಹಣೆ ಪ್ರಾಯೋಗಿಕ ಯೋಜನೆ’ (Evening Waste Collection Pilot). ಇನ್ಮುಂದೆ ಕಚೇರಿ ಮುಗಿಸಿ ಮನೆಗೆ ಮರಳುವಾಗ ನಿರಾಳವಾಗಿ ಕಸ ವಿಲೇವಾರಿ ಮಾಡಬಹುದು!

ಸಂಜೆ 5 ರಿಂದ ಮಧ್ಯರಾತ್ರಿ 12ರವರೆಗೆ ಹಗಲು-ರಾತ್ರಿ ಕಸದ ಕಾರ್ಯಾಚರಣೆ:

ರಸ್ತೆ ಬದಿಗಳಲ್ಲಿ ಕಸ ಸುರಿಯುವುದನ್ನು ತಡೆಗಟ್ಟಲು ಮತ್ತು ಘನತ್ಯಾಜ್ಯ ನಿರ್ವಹಣೆಯನ್ನು ಸಂಪೂರ್ಣವಾಗಿ ವ್ಯವಸ್ಥಿತಗೊಳಿಸಲು ಪಾಲಿಕೆಯು 5 ಪ್ರಮುಖ ವಾರ್ಡ್‌ಗಳಲ್ಲಿ ಈ ಹೊಸ ಪ್ರಯೋಗಕ್ಕೆ ಚಾಲನೆ ನೀಡಿದೆ. ಸಂಜೆ 5:00 ಗಂಟೆಯಿಂದ ಆರಂಭವಾಗಿ ಮಧ್ಯರಾತ್ರಿ 12:00 ಗಂಟೆಯವರೆಗೂ ಪಾಲಿಕೆಯ ಆಟೋಗಳು ಮನೆ ಮನೆಗೆ ತೆರಳಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಿವೆ.

5 ವಾರ್ಡ್‌ಗಳಲ್ಲಿ ಮೊದಲ ಹಂತದ ಪ್ರಯೋಗ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ 4 ವಾರ್ಡ್‌ಗಳು ಹಾಗೂ ಹೊಂಗಸಂದ್ರ ವಾರ್ಡ್ ಸೇರಿದಂತೆ ಒಟ್ಟು 5 ವಾರ್ಡ್‌ಗಳಲ್ಲಿ ಈ ವಿಶಿಷ್ಟ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಇದಕ್ಕಾಗಿ ಸುಮಾರು 20 ರಿಂದ 25 ವಿಶೇಷ ಆಟೋಗಳನ್ನು ನಿಯೋಜಿಸಲಾಗಿದೆ.

ಹೊಂಗಸಂದ್ರಕ್ಕೆ ಡಬಲ್ ಬಲ: ಹೊಂಗಸಂದ್ರ ವಾರ್ಡ್‌ನಲ್ಲಿ ಸದ್ಯ ಇರುವ ಮುಂಜಾನೆಯ ಕಸ ಸಂಗ್ರಹಣೆಯ ಜೊತೆಗೆ, ಸಂಜೆಯ ಶಿಫ್ಟ್‌ಗಾಗಿ ಹೆಚ್ಚುವರಿಯಾಗಿ 6 ವಾಹನಗಳನ್ನು (3 ಹಸಿ ಕಸಕ್ಕೆ ಹಾಗೂ 3 ಒಣ ಕಸಕ್ಕೆ) ಕಣಕ್ಕಿಳಿಸಲಾಗಿದೆ.

ಸ್ವತಃ ಪಾಲಿಕೆ ಕಮಿಷನರ್ ಕೆ. ಎನ್. ರಮೇಶ್ ಅವರೇ ಖುದ್ದಾಗಿ ರಾತ್ರಿ ವೇಳೆ ಸ್ಥಳ ಪರಿಶೀಲನೆ ನಡೆಸಿ, ಯೋಜನೆಯ ಅನುಷ್ಠಾನದ ಬಗ್ಗೆ ಅಧಿಕಾರಿಗಳೊಂದಿಗೆ ಪರಾಮರ್ಶೆ ನಡೆಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಫ್ಲೈಓವರ್ ಕೆಳಗೆ ಪಾರ್ಕಿಂಗ್ ಭಾಗ್ಯ: ಟ್ರಾಫಿಕ್ ಕಿರಿಕಿರಿಗೂ ಸಿಗಲಿದೆ ಮುಕ್ತಿ!

ಕಮಿಷನರ್ ಕೆ. ಎನ್. ರಮೇಶ್ ಅವರು ಈ ಪರಿಶೀಲನೆ ನಡೆಸುತ್ತಿದ್ದಾಗ ಸ್ಥಳೀಯ ಟ್ರಾಫಿಕ್ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸಿದ್ದಾರೆ. ಹೆಚ್.ಎಸ್.ಆರ್ ಲೇಔಟ್‌ನ ಜೆ.ಎಸ್.ಎಸ್ ಪಬ್ಲಿಕ್ ಶಾಲೆ ಎದುರಿನ ಮೇಲ್ಸೇತುವೆ (Flyover) ಕೆಳಗಿರುವ ಖಾಲಿ ಜಾಗವನ್ನು ಸೂಕ್ಷ್ಮವಾಗಿ ಗಮನಿಸಿದ ಅವರು, ಅಗ್ರಹಾರ ಕೆರೆ (Agara Lake) ಸುತ್ತಮುತ್ತಲಿನ ಟ್ರಾಫಿಕ್ ಹಾಗೂ ಅಸ್ತವ್ಯಸ್ತ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದಾರೆ. ಈ ಖಾಲಿ ಜಾಗವನ್ನು ‘ವ್ಯವಸ್ಥಿತ ಪಾರ್ಕಿಂಗ್ ವಲಯ’ವನ್ನಾಗಿ ಪರಿವರ್ತಿಸಲು ತಕ್ಷಣವೇ ಬ್ಲೂಪ್ರಿಂಟ್ ಮತ್ತು ಪ್ರಸ್ತಾವನೆ ಸಿದ್ಧಪಡಿಸುವಂತೆ ಇಂಜಿನಿಯರ್‌ಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.

ನಿವಾಸಿಗಳಿಂದ ಹರ್ಷದ ಮಹಾಪೂರ:

ಬೆಳಗ್ಗಿನ ಜಾವ ಕಸದ ಗಾಡಿಗಾಗಿ ಕಾಯುವ ಕಿರಿಕಿರಿ ತಪ್ಪಿಸಿರುವ ಪಾಲಿಕೆಯ ಈ ನಿರ್ಧಾರಕ್ಕೆ ಸ್ಥಳೀಯ ನಿವಾಸಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. “ಕಚೇರಿಗೆ ಹೋಗುವ ನಮಗೆ ಇದು ಅತ್ಯುತ್ತಮ ಯೋಜನೆ. ಇದರಿಂದ ರಸ್ತೆ ಬದಿಯಲ್ಲಿ ಕಸ ಎಸೆಯುವ ಪ್ರವೃತ್ತಿ ಸಂಪೂರ್ಣವಾಗಿ ನಿಲ್ಲಲಿದ್ದು, ನಮ್ಮ ಏರಿಯಾಗಳು ಇನ್ಮುಂದೆ ಇನ್ನಷ್ಟು ಸ್ವಚ್ಛವಾಗಿರಲಿವೆ” ಎಂದು ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

 


Share this with Friends

Related Post