ಬೆಂಗಳೂರು: ಸ್ಕೂಟಿಯಲ್ಲಿ ತೆರಳುತ್ತಿದ್ದ ಹುಬ್ಬಳ್ಳಿಯ ವಿದ್ಯಾ ಮಂಜುನಾಥ ಗೌಡರ್ ಎಂಬುವವರ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ದಾರುಣ ಘಟನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ಅಮಾಯಕ ಜೀವವೊಂದನ್ನು ಬಲಿಪಡೆದ ಈ ಘಟನೆ ತೀವ್ರ ನೋವು ಮತ್ತು ಕಳವಳವನ್ನುಂಟು ಮಾಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ರಾಜ್ಯದಲ್ಲಿ ಈಗಾಗಲೇ ಅಪಾಯಕಾರಿ ಮಾಂಜಾ ದಾರದ ಮಾರಾಟ ಮತ್ತು ಬಳಕೆಯ ಮೇಲೆ ನಿಷೇಧವಿದೆ. ಆದರೂ ಇದರ ಮಾರಾಟ ಮುಂದುವರಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಸಂಬಂಧಪಟ್ಟ ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರಸ್ತುತ ಜಾರಿಯಿರುವ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು” ಎಂದರು.
ಕೆಲವರ ಕ್ಷಣಿಕ ಮನೋರಂಜನೆಗಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ. ಗಾಳಿಪಟ ಹಾರಿಸುವುದು ಕೇವಲ ಮನೋರಂಜನೆಯಾಗಿರಬೇಕೇ ಹೊರತು, ಮತ್ತೊಬ್ಬರ ಬದುಕನ್ನೇ ಕಸಿದುಕೊಳ್ಳುವ ಅಪಾಯಕಾರಿ ಚಟುವಟಿಕೆಯಾಗಬಾರದು. ಅಪಾಯದ ಅರಿವಿದ್ದೂ ಇಂತಹ ದಾರಗಳನ್ನು ಬಳಸುವುದು ನಿರ್ಲಕ್ಷ್ಯವಲ್ಲ, ಬದಲಿಗೆ ಅಪರಾಧ ಕೃತ್ಯವಾಗುತ್ತದೆ. ಇದರಿಂದ ಜೀವಹಾನಿ ಸಂಭವಿಸಿದರೆ ಅದಕ್ಕೆ ಕಾರಣರಾದವರೇ ಕಾನೂನಿನ ಪ್ರಕಾರ ನೇರ ಹೊಣೆಗಾರರಾಗುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.
ಮನುಷ್ಯನ ಜೀವಕ್ಕಿಂತ ದೊಡ್ಡ ಮನೋರಂಜನೆ ಯಾವುದೂ ಇಲ್ಲ. ಕೆಲವರ ಮೋಜಿಗಾಗಿ ಅಮಾಯಕರ ಜೀವ ಬಲಿಯಾಗುವುದನ್ನು ತಡೆಯುವುದು ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ. ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ, ಅಪಾಯಕಾರಿ ಮಾಂಜಾ ದಾರದ ಬಳಕೆಗೆ ಪರಿಣಾಮಕಾರಿ ಕಡಿವಾಣ ಹಾಕಲು ಸರ್ಕಾರ ಬದ್ಧವಾಗಿದೆ ಎಂದು ಡೆಪ್ಯುಟಿ ಸಿಎಂ ಸ್ಪಷ್ಟಪಡಿಸಿದ್ದಾರೆ.
ಏನಿದು ಘಟನೆ?
ವಿದ್ಯಾ ಮಂಜುನಾಥ ಗೌಡರ ಅವರು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ತಮ್ಮ ಮನೆಯಿಂದ ಸ್ಕೂಟಿ ಮೇಲೆ ಎಂದಿನಂತೆ ಪ್ರಯೋಗಾಲಯದ (ಲ್ಯಾಬ್) ಕೆಲಸಕ್ಕೆ ಹೊರಟಿದ್ದರು. ಅವರು ಹಳೇ ಹುಬ್ಬಳ್ಳಿಯ ಕಾರವಾರ ರಸ್ತೆಯ ಶಿವಶಂಕರ ಕಾಲೋನಿ ಬಳಿ ಸಾಗುತ್ತಿದ್ದಾಗ, ಗಾಳಿಯಲ್ಲಿ ಹಾರಾಡುತ್ತಿದ್ದ ಹರಿತವಾದ ಗಾಳಿಪಟದ ಮಾಂಜಾ ದಾರ (ಗಾಜಿನ ಪುಡಿ ಸವರಿದ ನಿಷೇಧಿತ ದಾರ) ಏಕಾಏಕಿ ಅವರ ಕುತ್ತಿಗೆಗೆ ಬಿಗಿದುಕೊಂಡಿದೆ.
ದಾರವು ಅತ್ಯಂತ ತೀಕ್ಷ್ಣವಾಗಿದ್ದರಿಂದ ಅವರ ಕುತ್ತಿಗೆಯ ಭಾಗವು ಆಳವಾಗಿ ಕತ್ತರಿಸಲ್ಪಟ್ಟಿತು. ಇದರಿಂದಾಗಿ ತೀವ್ರ ನೋವಿನಿಂದ ವಿದ್ಯಾ ಅವರು ಸ್ಕೂಟಿಯ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಬಿದ್ದರು. ಕುತ್ತಿಗೆಯಿಂದ ವಿಪರೀತ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರು. ಆದರೆ, ದುರದೃಷ್ಟವಶಾತ್ ತೀವ್ರ ರಕ್ತಸ್ರಾವದ ಕಾರಣದಿಂದಾಗಿ ಆಸ್ಪತ್ರೆ ತಲುಪುವ ಮುನ್ನವೇ ಅವರು ದಾರಿಯಲ್ಲಿ ಕೊನೆಯುಸಿರೆಳೆದರು.

