ಮೈಸೂರು: “ನನ್ನ ವಿರುದ್ಧ ನಡೆದಿರುವ ನಕಲಿ ಸ್ಟಿಂಗ್ ಆಪರೇಷನ್ ಕೃತ್ಯದ ಹಿಂದಿರುವ ಅಸಲಿ ಮುಖಗಳು ಯಾರೆಂಬ ಸತ್ಯ ಹೊರಬರಲಿ ಎಂದೇ ನಾನೇ ಖುದ್ದಾಗಿ ದೂರು ನೀಡಿದ್ದೇನೆ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಸಂಪೂರ್ಣ ಸುಳ್ಳು ಮತ್ತು ಸೃಷ್ಟಿ ಮಾಡಿರುವಂಥದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನನಗೆ ಬೇಸರವೂ ಇಲ್ಲ, ಹೆದರಿಕೆಯೂ ಇಲ್ಲ. ನನ್ನ ವರ್ಚಸ್ಸಿಗೆ ಮಸಿ ಬಳಿಯಲು ಯಾರು ಎಷ್ಟೇ ಪ್ರಯತ್ನ ಮಾಡಿದರೂ ರಾಜ್ಯದ ಜನತೆ ಅದನ್ನು ನಂಬುವುದಿಲ್ಲ. ಈ ಸುಳ್ಳು ಕೃತ್ಯ ಹೆಚ್ಚು ಪ್ರಚಾರ ಆಗಬಾರದು ಎಂಬ ಕಾರಣಕ್ಕಾಗಿಯೇ ಸಿವಿಲ್ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಾಯಕರ ಕೈವಾಡವಿದೆಯೇ?
ಈ ಸ್ಟಿಂಗ್ ಷಡ್ಯಂತ್ರದ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕರ ಕೈವಾಡವಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಇದರ ಹಿಂದೆ ನಮ್ಮ ಪಕ್ಷದವರು ಇದ್ದಾರೋ ಅಥವಾ ಬೇರೆ ಪಕ್ಷದವರು ಇದ್ದಾರೋ ಎಂಬುದು ತನಿಖೆಯಿಂದಲೇ ಬಹಿರಂಗವಾಗಬೇಕು. ಪ್ರಸ್ತುತ ನಡೆಯುತ್ತಿರುವ ಪೊಲೀಸ್ ತನಿಖೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಈ ಪ್ರಕರಣಕ್ಕೆ ಪ್ರತ್ಯೇಕವಾಗಿ ಎಸ್ಐಟಿ (SIT) ರಚಿಸುವ ಅಗತ್ಯವಿಲ್ಲ” ಎಂದರು. ದಕ್ಷಿಣ ಕನ್ನಡದ ಕೃಪಾ ಆಳ್ವಾ ಹಾಗೂ ಮಾಧ್ಯಮ ಮುಖ್ಯಸ್ಥ ರಾಕೇಶ್ ಶೆಟ್ಟಿ ಇಬ್ಬರೂ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ತಾವೇ ಇದನ್ನು ಮಾಡಿದ್ದಾಗಿ ರಾಕೇಶ್ ಶೆಟ್ಟಿ ಒಪ್ಪಿಕೊಂಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಅಧಿಕಾರ ಇಲ್ಲದಾಗ ಸಂಚು:
“ನಾನು 1984ರಲ್ಲಿ ಮೊದಲ ಬಾರಿಗೆ ಮಂತ್ರಿಯಾದೆ. ಎರಡು ಬಾರಿ ಸೇರಿ ಒಟ್ಟು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದೆ. ಅಂದಿನಿಂದ ಇಂದಿನವರೆಗೆ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ಈಗ ನನ್ನ ಬಳಿ ಅಧಿಕಾರ ಇಲ್ಲದಾಗ ಇಂತಹ ಷಡ್ಯಂತ್ರ ರೂಪಿಸುತ್ತಿದ್ದಾರೆ. ಆದರೆ ಅವರ ಉದ್ದೇಶ ಎಂದಿಗೂ ಸಫಲವಾಗುವುದಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸೆಪ್ಟೆಂಬರ್ 26ರಂದು ಈ ವಿಷಯ ಮೊದಲ ಬಾರಿಗೆ ತಮ್ಮ ಗಮನಕ್ಕೆ ಬಂದಿದ್ದಾಗಿ ಅವರು ಇದೇ ವೇಳೆ ತಿಳಿಸಿದರು.
ದಸರಾ ಉಸ್ತುವಾರಿ ಬಗ್ಗೆ ಅಸಮಾಧಾನ:
ಮೈಸೂರು ದಸರಾ ಆಚರಣೆಗಾಗಿ ಪ್ರತಿದಿನ ಮೂವರು ಸಚಿವರಿಗೆ ಉಸ್ತುವಾರಿ ಹಂಚಿಕೆ ಮಾಡಿದ್ದ ಮುಖ್ಯಮಂತ್ರಿಗಳ ತೀರ್ಮಾನದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ, “ನನ್ನ ಪ್ರಕಾರ ಈ ರೀತಿ ಜವಾಬ್ದಾರಿ ಹಂಚಿಕೆ ಮಾಡುವ ಅಗತ್ಯವಿರಲಿಲ್ಲ. ಆದರೆ ಮುಖ್ಯಮಂತ್ರಿಗಳು ತೀರ್ಮಾನ ಮಾಡಿ ಮಾಡಿದ್ದರು. ಆದರೆ ಈ ಸಚಿವರೇ ಸರಿಯಾಗಿ ಬಂದಿರಲಿಲ್ಲ. ಈಗ ಸರ್ಕಾರವೇ ಬೇರೆ, ಮುಖ್ಯಮಂತ್ರಿಗಳೇ ಬೇರೆ” ಎಂದು ಮಾರ್ಮಿಕವಾಗಿ ನುಡಿದರು.

