Fri. Oct 23rd, 2026

ಕೆಇಎ ವಿವಿಧ ನೇಮಕಾತಿ ಪರೀಕ್ಷೆಗಳು ನಾಳೆಯಿಂದ ಆರಂಭ: ಅಕ್ರಮ ತಡೆಗೆ ಸಕಲ ಸಿದ್ಧತೆ

Share this with Friends

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಿವಿಧ ಇಲಾಖೆಗಳ ನೇಮಕಾತಿಗಾಗಿ ಅಕ್ಟೋಬರ್ 24 ರಿಂದ 27 ರವರೆಗೆ ನಡೆಸಲಿರುವ ಲಿಖಿತ ಪರೀಕ್ಷೆಗಳಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪರೀಕ್ಷಾ ಅಕ್ರಮಗಳಿಗೆ ಆಸ್ಪದವಿಲ್ಲದಂತೆ ಅತ್ಯಂತ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಯಾವ ಯಾವ ಹುದ್ದೆಗಳಿಗೆ ಪರೀಕ್ಷೆ?

ಅಕ್ಟೋಬರ್ 24 ಮತ್ತು 25 (ಕಲ್ಯಾಣ ಕರ್ನಾಟಕ ವೃಂದ): ಭೂಮಾಪಕ (190 ಹುದ್ದೆ), ಗ್ರಾಮ ಆಡಳಿತಾಧಿಕಾರಿ (VAO – 67 ಹುದ್ದೆ) ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಶಿಕ್ಷಕರ (40 ಹುದ್ದೆ) ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ.

ಅಕ್ಟೋಬರ್ 26 ಮತ್ತು 27 (ಉಳಿಕೆ ಮೂಲ ವೃಂದ): ಇಎಸ್ಐ-ನರ್ಸಿಂಗ್ ಅಧಿಕಾರಿ (90 ಹುದ್ದೆ), ಫಾರ್ಮಸಿ ಅಧಿಕಾರಿ (98 ಹುದ್ದೆ) ಮತ್ತು ವಸತಿ ಶಾಲೆಗಳ ಶಿಕ್ಷಕರ (100 ಹುದ್ದೆ) ಹುದ್ದೆಗಳಿಗೆ ಪರೀಕ್ಷೆ ಆಯೋಜಿಸಲಾಗಿದೆ.

89 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಭಾಗಿ:

ಕಲ್ಯಾಣ ಕರ್ನಾಟಕ ವೃಂದದ ಪರೀಕ್ಷೆಗಳು ಬೆಂಗಳೂರು ಸೇರಿದಂತೆ ಬಳ್ಳಾರಿ, ಬೀದರ್, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳ ಒಟ್ಟು 237 ಕೇಂದ್ರಗಳಲ್ಲಿ ನಡೆಯಲಿದ್ದು, 89,265 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಅದೇ ರೀತಿ, ಅಕ್ಟೋಬರ್ 26 ಮತ್ತು 27 ರಂದು ನಡೆಯುವ ಉಳಿಕೆ ಮೂಲ ವೃಂದದ ಪರೀಕ್ಷೆಗಳನ್ನು ಬೆಂಗಳೂರು, ಧಾರವಾಡ ಮತ್ತು ದಾವಣಗೆರೆ ಸೇರಿದಂತೆ ಒಟ್ಟು 119 ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಒಟ್ಟು 48,767 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.

ವೆಬ್ ಕಾಸ್ಟಿಂಗ್ ಮೂಲಕ ತೀವ್ರ ನಿಗಾ:

ಪರೀಕ್ಷಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಎಲ್ಲಾ ಪರೀಕ್ಷಾ ಕೇಂದ್ರಗಳ ಮೇಲೆ ವೆಬ್ ಕಾಸ್ಟಿಂಗ್ (Web Casting) ಮೂಲಕ ನೇರ ನಿಗಾ ಇಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಪರೀಕ್ಷೆಯ ಸಂಪೂರ್ಣ ಉಸ್ತುವಾರಿ ವಹಿಸಲಿದ್ದಾರೆ. ಪರೀಕ್ಷಾ ಪೂರ್ವಸಿದ್ಧತೆಗಳ ಕುರಿತು ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಮತ್ತು ಪರೀಕ್ಷಾ ನಿಯಂತ್ರಕಿ ಅರ್ಚನಾ ಅವರು ಈಗಾಗಲೇ ಎಲ್ಲಾ ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

 

 

 


Share this with Friends

Related Post