Fri. Oct 23rd, 2026

ಸ್ಟಿಂಗ್ ಆಪರೇಷನ್ ಮೂಲಕ ಸಿದ್ದರಾಮಯ್ಯ ತೇಜೋವಧೆ ಸಂಚು: ಕಾಂಗ್ರೆಸ್ ನಾಯಕರ ವಿರುದ್ಧ ಕುಮಾರಸ್ವಾಮಿ ಆರೋಪ

Share this with Friends

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಜೆಡಿಎಸ್ ಪಕ್ಷವು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಿರುವ ವರದಿಯ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಸ್ಟಿಂಗ್ ಆಪರೇಷನ್ ಮಾಡಿದ್ದು ಯಾರು? ಅದರ ಮಾಸ್ಟರ್ ಮೈಂಡ್ ಹಾಗೂ ಕಿಂಗ್‌ಪಿನ್ ಯಾರು? ವಿಡಿಯೋ ಚಿತ್ರೀಕರಣದ ವೇಳೆ ಆರೋಪಿತ ಹಿರಿಯ ಪತ್ರಕರ್ತಗೆ ಸಹಕರಿಸಿದ ಕಾಂಗ್ರೆಸ್‌ನ ಆ ಮಹಿಳಾಮಣಿ ಯಾರು ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ” ಎಂದು ಅವರು ತಿರುಗೇಟು ನೀಡಿದ್ದಾರೆ.

ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಷಡ್ಯಂತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರೇ ನೇರವಾಗಿ ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಜಾಮೀನು ಕೊಡಿಸಲು ಸರ್ಕಾರದ ಒಳಗೇ ಷಡ್ಯಂತ್ರ್ಯ:

ಸ್ಟಿಂಗ್‌ಪಿನ್ ಆಗಿರುವ ಹಿರಿಯ ಪತ್ರಕರ್ತರೊಬ್ಬರನ್ನು ಕಾನೂನು ಕ್ರಮದಿಂದ ಪಾರು ಮಾಡಲು ಸರ್ಕಾರದ ಉನ್ನತ ಮಟ್ಟದ ವ್ಯಕ್ತಿಗಳು ಹಾಗೂ ಕೆಲವು ಪೊಲೀಸ್ ಅಧಿಕಾರಿಗಳು ಒಳಗೊಳಗೇ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು. “ಆತನನ್ನು ಹೊರಗೆ ಬಿಟ್ಟರೆ ಸ್ಟಿಂಗ್ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸುವ ತೀವ್ರ ಅಪಾಯವಿದೆ. ಆತನ ಬಳಿ ಇನ್ನೂ ಪ್ರಸಾರವಾಗದ ನೂರಾರು ವಿಡಿಯೋಗಳಿದ್ದು, ಪ್ರಮುಖ ಗಣ್ಯರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಲು ಬಳಸಲಾಗಿದೆ” ಎಂದು ಮಾಧ್ಯಮ ವರದಿಯೊಂದನ್ನು ಪ್ರದರ್ಶಿಸಿದರು.

ವಿಕ್ಕಿ ಸಾವು ಮತ್ತು ಮುಖ್ಯಮಂತ್ರಿಗಳ ವಿರುದ್ಧ ಚಾಟಿ:

ಆರೋಪಿ ನಡೆಸುತ್ತಿದ್ದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ‘ವಿಕ್ಕಿ’ ಎಂಬ ಯುವಕನ 2024ರ ಸಾವು ಅತ್ಯಂತ ಅನುಮಾನಾಸ್ಪದವಾಗಿದೆ. ಇದನ್ನು ಕೇವಲ ಅಸ್ವಾಭಾವಿಕ ಸಾವು (UDR) ಎಂದು ದಾಖಲಿಸಿ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂದು ಸಚಿವರು ದೂರಿದರು. ಈ ಪ್ರಕರಣದಲ್ಲಿ ಹಾಲಿ ಮುಖ್ಯಮಂತ್ರಿ (ಡಿ.ಕೆ. ಶಿವಕುಮಾರ್) ಅವರ ಪಾತ್ರವೂ ಇದೆ ಎಂದು ಆರೋಪಿಸಿದ ಅವರು, “ಕ್ಯಾಬಿನೆಟ್‌ನಲ್ಲಿ ಚರ್ಚಿಸುವ ಬದಲು ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕದ ಹೋಟೆಲ್‌ನಲ್ಲಿ ಈ ಕಳಂಕಿತ ಆರೋಪಿಯನ್ನು ಮುಖ್ಯಮಂತ್ರಿಗಳು ಭೇಟಿಯಾಗಿದ್ದು ಏಕೆ? ಪೊಲೀಸರು ಮೊದಲು ಮುಖ್ಯಮಂತ್ರಿಗಳ ಆಪ್ತರ ಹಾಗೂ ಆರೋಪಿತ ಹಿರಿಯ ಪತ್ರಕರ್ತನ ಮೊಬೈಲ್ ಕರೆಗಳ ವಿವರವನ್ನು (CDR) ತನಿಖೆ ನಡೆಸಲಿ” ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಒಳರಾಜಕೀಯದ ಪಿತೂರಿ:

“ಈ ಘಟನೆ 2011ರಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದರೆ, ಸಂಬಂಧಿಸಿದ ಮಹಿಳೆಯನ್ನು 2023ರಲ್ಲಿ ಕೂರಿಸಿಕೊಂಡು ಸ್ಟಿಂಗ್ ಮಾಡಿದ್ದೇಕೆ? ಇದು ಸಂಪೂರ್ಣವಾಗಿ ಕಾಂಗ್ರೆಸ್‌ನ ಒಳರಾಜಕೀಯದ ಫಲ” ಎಂದು ವಿಶ್ಲೇಷಿಸಿದ ಕುಮಾರಸ್ವಾಮಿ, ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ನನ್ನ ಮುಖ್ಯ ಉದ್ದೇಶವೇ ಹೊರತು ಇದರಲ್ಲಿ ಯಾವುದೇ ರಾಜಕೀಯ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿದರು. ಅಗತ್ಯಬಿದ್ದರೆ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ಮಾತನಾಡಲು ಸಿದ್ಧನಿದ್ದೇನೆ ಎಂದೂ ಅವರು ಇದೇ ವೇಳೆ ತಿಳಿಸಿದರು.

 

 


Share this with Friends

Related Post