ನವದೆಹಲಿ: ಭಾರತೀಯ ಸಂಸತ್ತಿನ ಆವರಣದಲ್ಲಿರುವ ಪ್ರೇರಣಾ ಸ್ಥಳದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ಜನ್ಮ ಜಯಂತಿ ಹಾಗೂ ಬ್ರಿಟಿಷರ ವಿರುದ್ಧದ ಅವರ 202ನೇ ವರ್ಷದ ವಿಜಯೋತ್ಸವವನ್ನು ಇಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರ ನೇತೃತ್ವದಲ್ಲಿ ಈ ವಿಶೇಷ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ವೀರವನಿತೆ ರಾಣಿ ಚೆನ್ನಮ್ಮನವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, “ರಾಷ್ಟ್ರ ಕಂಡ ಅಪ್ರತಿಮ ಮಹಿಳಾ ಸೇನಾನಿ ಕಿತ್ತೂರು ರಾಣಿ ಚೆನ್ನಮ್ಮ ಕೇವಲ ಯುದ್ಧ ಮಾಡಿದ ರಾಣಿಯಲ್ಲ. ಅವರು ಸಾಮ್ರಾಜ್ಯಶಾಹಿ ಬ್ರಿಟಿಷ್ ಶಕ್ತಿಗೆ ಸವಾಲೆಸೆದು, ಪ್ರತಿರೋಧದ ಅಮರ ಸಂಕೇತವಾಗಿ ಇತಿಹಾಸದಲ್ಲಿ ಉಳಿದ ವೀರ ಮಹಿಳೆ. ಸಂಸತ್ತಿನ ಈ ಪವಿತ್ರ ಸ್ಥಳದಲ್ಲಿರುವ ಚೆನ್ನಮ್ಮನವರ ಶೌರ್ಯ ಮತ್ತು ಧೈರ್ಯದ ಕಿಚ್ಚು ಇಂದು ದೇಶ ಕಾಯುವ ವೀರರಿಗೆ ಹಾಗೂ ನಾಡು-ನುಡಿಯ ಅಭಿಮಾನಿಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ” ಎಂದು ತಿಳಿಸಿದರು. ಪ್ರತಿವರ್ಷ ಈ ಆಚರಣೆಗೆ ಅವಕಾಶ ಮಾಡಿಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ನಾಡಿನ ಜನತೆಯ ಪರವಾಗಿ ಸಚಿವರು ಕೃತಜ್ಞತೆ ಸಲ್ಲಿಸಿದರು.
ಕೂಡಲಸಂಗಮದ ಬಸವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಪ್ರತಿವರ್ಷ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಂಸದರಾದ ಪಿ.ಸಿ. ಮೋಹನ್, ಡಾ. ಸುಧಾಕರ್, ಮಾಜಿ ಸಚಿವರಾದ ಮುರಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಶಂಕರಾನಂದ ಸ್ವಾಮೀಜಿ, ಆತ್ಮಾರಾಮ ಸ್ವಾಮೀಜಿ, ವಿನಾಯಕ ಸ್ವಾಮೀಜಿ ಸೇರಿದಂತೆ ದೆಹಲಿ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಕನ್ನಡಿಗರು ಉಪಸ್ಥಿತರಿದ್ದರು.

