Fri. Oct 23rd, 2026

ರೈತರ ಜೀವನ್ಮರಣ ಬೇಡಿಕೆಗಳಿಗಾಗಿ ಹೆದ್ದಾರಿ ಬಂದ್: ಅಕ್ಟೋಬರ್ 26ಕ್ಕೆ ಮುಖ್ಯಮಂತ್ರಿಗಳ ಸಭೆ ನಿಗದಿ

Share this with Friends

ಮಂಡ್ಯ: ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ದರ ನಿಗದಿ ಹಾಗೂ ಸಂಪೂರ್ಣ ಕೃಷಿ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಬಳಿ ಬೃಹತ್ ಹೆದ್ದಾರಿ ತಡೆ ಚಳವಳಿ ಶನಿವಾರ ಯಶಸ್ವಿಯಾಗಿ ನಡೆಯಿತು.

ದರ್ಶನ್ ಪುಟ್ಟಣ್ಣಯ್ಯ ಅವರ ಕರೆಯ ಮೇರೆಗೆ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ರೈತರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಸುಮಾರು ಎರಡು ಗಂಟೆಗಳ ಕಾಲ ಸಂಪೂರ್ಣ ಬಂದ್ ಮಾಡಿ ಆಕ್ರೋಶ ಹೊರಹಾಕಿದರು. “ರೈತರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಭಿನ್ನಮತವನ್ನು ಬಿಟ್ಟು ಸಂಘಟನೆಗಳು ಒಗ್ಗೂಡಿವೆ” ಎಂದು ಪ್ರತಿಭಟನೆಯಲ್ಲಿ ಶಾಸಕರು ತಿಳಿಸಿದರು.

ರೈತರ ಪ್ರಮುಖ ಬೇಡಿಕೆಗಳು:

ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹5,500 ಕಡ್ಡಾಯ ಬೆಂಬಲ ಬೆಲೆ ನಿಗದಿಪಡಿಸಬೇಕು.

ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಬಾಕಿ ಹಣವನ್ನು ತಕ್ಷಣವೇ ಪಾವತಿಸಬೇಕು.

ಹಾಲಿನ ಖರೀದಿ ದರವನ್ನು ಹೆಚ್ಚಿಸಬೇಕು ಹಾಗೂ ಸಂಪೂರ್ಣ ಕೃಷಿ ಸಾಲವನ್ನು ಯಾವುದೇ ಷರತ್ತಿಲ್ಲದೆ ಮನ್ನಾ ಮಾಡಬೇಕು.

ಮಣಿದ ಸರ್ಕಾರ; ಅ. 26 ಕ್ಕೆ ಸಿಎಂ ಸಭೆ ಭರವಸೆ:

ಹೆದ್ದಾರಿ ತಡೆಯಿಂದಾಗಿ ಚಲನವಲನ ಸ್ತಬ್ಧಗೊಂಡ ಹಿನ್ನೆಲೆಯಲ್ಲಿ ಐಜಿಪಿ ಬೋರಲಿಂಗಯ್ಯ ರೈತರೊಂದಿಗೆ ಮಾತುಕತೆ ನಡೆಸಿದರು. ಪ್ರತಿಭಟನೆಯ ತೀವ್ರತೆಗೆ ಎಚ್ಚೆತ್ತ ರಾಜ್ಯ ಸರ್ಕಾರವು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಜಿಲ್ಲಾಧಿಕಾರಿ ಡಾ. ಕುಮಾರ್ ಅವರನ್ನು ಸ್ಥಳಕ್ಕೆ ಕಳುಹಿಸಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ರೈತ ಮುಖಂಡರೊಂದಿಗೆ ಚರ್ಚಿಸಿದ ಸಚಿವರು, ಅಕ್ಟೋಬರ್ 26 ರಂದು ಬೆಳಗಾವಿಯಲ್ಲಿ ಸ್ವತಃ ಮುಖ್ಯಮಂತ್ರಿಗಳೇ ರೈತರ ಮಹತ್ವದ ಸಭೆ ಕರೆದಿದ್ದು, ಅಲ್ಲಿ ಸಮಸ್ಯೆಗಳ ಪರಿಹಾರಕ್ಕೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಭರವಸೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರಸ್ತೆ ತಡೆ ಹಿಂಪಡೆದ ರೈತ ಮುಖಂಡರು, ಅಕ್ಟೋಬರ್ 26ರ ಸಭೆಯ ನಿರ್ಧಾರವನ್ನು ಆಧರಿಸಿ ಮುಂದಿನ ಹೋರಾಟದ ರೂಪುರೇಷೆ ಪ್ರಕಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟದಲ್ಲಿ ರೈತ ನಾಯಕರಾದ ಬಡಗಲಪುರ ನಾಗೇಂದ್ರ, ಕೆಂಪೂಗೌಡ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

 

 


Share this with Friends

Related Post