Wed. Oct 28th, 2026

ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ; ಹೊಸದಾಗಿ ಜನಾದೇಶ ಪಡೆಯಲಿ: ಬಿ.ಎಸ್. ಯಡಿಯೂರಪ್ಪ ಸವಾಲು

Share this with Friends

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಪ್ರಜ್ಞಾವಂತ ಮತದಾರರು ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಮೂಲಕ ತಕ್ಕ ತೀರ್ಪು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ, ತಕ್ಷಣ ರಾಜೀನಾಮೆ ನೀಡಿ ಹೊಸದಾಗಿ ಜನಾದೇಶ ಪಡೆಯಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಹಮ್ಮಿಕೊಂಡಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಯವು ರಾಜ್ಯದ ಆಡಳಿತಾರೂಢ ಪಕ್ಷದ ವಿರುದ್ಧ ಸಾರ್ವಜನಿಕರಲ್ಲಿ ಮನೆಮಾಡಿರುವ ತೀವ್ರ ಆಕ್ರೋಶಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಮತಪತ್ರದ ಮೂಲಕವೇ ಜನಾಕ್ರೋಶ ವ್ಯಕ್ತ:

ಈ ಚುನಾವಣೆ ಇವಿಎಂ ಯಂತ್ರಗಳ ಮೂಲಕ ನಡೆದಿಲ್ಲ, ಬದಲಿಗೆ ಸಂಪೂರ್ಣವಾಗಿ ಮತಪತ್ರದ (ಬ್ಯಾಲೆಟ್ ಪೇಪರ್) ಮೂಲಕವೇ ನಡೆದಿದೆ ಎಂದು ಯಡಿಯೂರಪ್ಪ ನೆನಪಿಸಿದರು. ಮತಗಳ್ಳತನದ ಕುರಿತು ಕಾಂಗ್ರೆಸ್ ನಾಯಕರು ಹರಡುತ್ತಿದ್ದ ಸುಳ್ಳುಗಳನ್ನು ಶಿಕ್ಷಕರು ಮತ್ತು ಪದವೀಧರರು ಒಟ್ಟಾಗಿ ತಿರಸ್ಕರಿಸಿದ್ದಾರೆ. ಈ ಬಾರಿ ದಾಖಲಾದ ಹೆಚ್ಚಿನ ಮತದಾನದ ಪ್ರಮಾಣವು ಸ್ಪಷ್ಟವಾಗಿ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಸಾಬೀತುಪಡಿಸಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಾದ ಕೆ.ಎಂ. ಸುರೇಶ್ (23 ಸಾವಿರಕ್ಕೂ ಅಧಿಕ ಮತಗಳ ಅಂತರ), ಎಸ್.ವಿ. ಸಂಕನೂರು (9 ಸಾವಿರಕ್ಕೂ ಅಧಿಕ), ಶಶೀಲ್ ನಮೋಶಿ (3 ಸಾವಿರಕ್ಕೂ ಅಧಿಕ) ಹಾಗೂ ಎ.ಪಿ. ರಂಗನಾಥ್ (908 ಮತಗಳು) ಭರ್ಜರಿ ಜಯ ಸಾಧಿಸಿದ್ದಾರೆ ಎಂದು ಅವರು ವಿವರ ನೀಡಿದರು.

ರೈತರ ಕಣ್ಣೀರು ಮತ್ತು ಆರ್ಥಿಕ ದಿವಾಳಿತನ:

ರಾಜ್ಯದ ಆರು ಕೋಟಿ ಜನರು ಕಾಂಗ್ರೆಸ್ ಸರ್ಕಾರದ ನೀತಿಗಳಿಂದಾಗಿ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ ಯಡಿಯೂರಪ್ಪ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದರು. ಕೆಪಿಎಸ್‌ಸಿ ಭ್ರಷ್ಟಾಚಾರ, ಮಿತಿಮೀರಿದ ಬೆಲೆ ಏರಿಕೆ, ಸುಮಾರು 3500 ರೈತರ ಆತ್ಮಹತ್ಯೆ ಮತ್ತು ಬರಗಾಲ ನಿರ್ವಹಣೆಯ ವೈಫಲ್ಯಗಳು ಸರ್ಕಾರದ ಸಾಧನೆಯಾಗಿದೆ. ಕಳೆದ 8 ತಿಂಗಳಿನಿಂದ ವೃದ್ಧಾಪ್ಯ ಹಾಗೂ ಅಂಗವಿಕಲರ ವೇತನವನ್ನು ನೀಡಲಾಗಿಲ್ಲ. ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಲು ಹಣವಿಲ್ಲ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಹಾಗಿದ್ದಲ್ಲಿ, ಸಾರ್ವಜನಿಕರಿಂದ ಸಂಗ್ರಹಿಸಿದ ಕೋಟ್ಯಂತರ ರೂಪಾಯಿ ತೆರಿಗೆ ಹಣ ಎಲ್ಲಿಗೆ ಹೋಯಿತು ಎಂದು ಅವರು ಪ್ರಶ್ನಿಸಿದರು.

ಕುರ್ಚಿ ಕಚ್ಚಾಟದಲ್ಲೇ ಕಾಲಹರಣ: ಗೋವಿಂದ ಕಾರಜೋಳ ಟೀಕೆ

ಇದೇ ವೇಳೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ ಅವರು, ಪ್ರಸ್ತುತ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಬದಿಗೊತ್ತಿ ಕೇವಲ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ರಾಜಕೀಯ ಸ್ಟಿಂಗ್ ಆಪರೇಷನ್‌ಗಳಲ್ಲೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು. ಕೇವಲ ಅಧಿಕಾರ ಮತ್ತು ಕುರ್ಚಿ ಕಚ್ಚಾಟಕ್ಕಾಗಿ ರಾಜ್ಯದ ವ್ಯವಸ್ಥೆಯನ್ನು ಬಲಿಗೊಡಲಾಗುತ್ತಿದ್ದು, ಸುಶಿಕ್ಷಿತ ಮತದಾರರು ಇದಕ್ಕೆ ಸರಿಯಾದ ಪಾಠ ಕಲಿಸಿದ್ದಾರೆ. ಸ್ವಲ್ಪವಾದರೂ ಸ್ವಾಭಿಮಾನ ಉಳಿದಿದ್ದರೆ ಸರ್ಕಾರ ತಕ್ಷಣವೇ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಮಾಜಿ ಸಚಿವ ಕೆ. ಗೋಪಾಲಯ್ಯ, ನೂತನವಾಗಿ ಆಯ್ಕೆಯಾದ ಕೆ.ಎಂ. ಸುರೇಶ್, ಎ.ಪಿ. ರಂಗನಾಥ್ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

 


Share this with Friends

Related Post