ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾರ್ವಜನಿಕರಿಗೆ ಉಂಟಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ತನ್ನ ನೌಕರರು ಹಾಗೂ ಪಿಂಚಣಿದಾರರಿಗೆ ಬಂಪರ್ ಕೊಡುಗೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (DA) ಮತ್ತು ಪಿಂಚಣಿದಾರರ ತುಟ್ಟಿ ಪರಿಹಾರವನ್ನು (DR) ಶೇಕಡಾ 3 ರಷ್ಟು ಹೆಚ್ಚಿಸಲು ಅಧಿಕೃತ ಅನುಮೋದನೆ ನೀಡಿದೆ.
ಈ ಪರಿಷ್ಕೃತ ಹೆಚ್ಚಳವು 2026ರ ಜುಲೈ 1 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಇದರಿಂದಾಗಿ ನೌಕರರ ಮೂಲ ವೇತನ ಮತ್ತು ಪಿಂಚಣಿಯ ಮೇಲಿದ್ದ ಪ್ರಸ್ತುತ ತುಟ್ಟಿಭತ್ಯೆಯ ದರವು ಶೇ. 60 ರಿಂದ ಶೇ. 63 ಕ್ಕೆ ಏರಿಕೆಯಾಗಲಿದೆ.
ಬೊಕ್ಕಸಕ್ಕೆ ವಾರ್ಷಿಕ 10,016 ಕೋಟಿ ರೂ. ಹೊರೆ:
ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ದೇಶದ ಸುಮಾರು 48.54 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.71 ಲಕ್ಷ ಪಿಂಚಣಿದಾರರಿಗೆ ನೇರ ಆರ್ಥಿಕ ಅನುಕೂಲವಾಗಲಿದೆ. ಭತ್ಯೆಗಳ ಈ ಪರಿಷ್ಕರಣೆಯಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸದ ಮೇಲೆ ವಾರ್ಷಿಕವಾಗಿ ಒಟ್ಟು 10,016.10 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.
7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಅನ್ವಯ ಈ ಹಿಂದೆ ಒಪ್ಪಿಕೊಳ್ಳಲಾದ ನಿಯಮಾವಳಿಗಳು ಮತ್ತು ಸೂತ್ರಗಳಿಗೆ ಅನುಗುಣವಾಗಿಯೇ ಪ್ರಸ್ತುತ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರದ ಹೆಚ್ಚಳದ ಕಂತನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ. ಹಬ್ಬದ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಈ ಪ್ರಕಟಣೆ ಹೊರಡಿಸಿರುವುದು ನೌಕರರ ವಲಯದಲ್ಲಿ ಹರ್ಷ ತಂದಿದೆ.

