ಬೆಂಗಳೂರು: ರಾಜ್ಯದಲ್ಲಿ ದಿನೇದಿನೇ ಕುಸಿಯುತ್ತಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಲು ಹಾಗೂ ದಶಕಗಳ ಇತಿಹಾಸ ಹೊಂದಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಸಂರಕ್ಷಿಸಲು ‘ಕರ್ನಾಟಕ ಪಾರಂಪರಿಕ ಶಾಲಾ ಪುನಶ್ಚೇತನ ನೀತಿ’ಯನ್ನು ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಶಾಸಕ ದಿನೇಶ್ ಗೂಳೀಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಂಬರುವ ಕನ್ನಡ ರಾಜ್ಯೋತ್ಸವದ ಅಂಗವಾಗಿ, ರಾಜ್ಯದ 50, 75 ಮತ್ತು 100 ವರ್ಷಗಳನ್ನು ಪೂರೈಸಿರುವ ಐತಿಹಾಸಿಕ ಸರ್ಕಾರಿ ಶಾಲೆಗಳ (Heritage Schools) ಅಭಿವೃದ್ಧಿಗಾಗಿ ಸಮಗ್ರ ಕಾರ್ಯಯೋಜನೆ ರೂಪಿಸುವಂತೆ ಕೋರಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪ್ರತ್ಯೇಕ ಅಧಿಕೃತ ಪತ್ರಗಳನ್ನು ಬರೆದಿದ್ದಾರೆ.
ಸರ್ಕಾರಿ ಶಾಲೆಗಳ ಮುಂದಿರುವ ಶೈಕ್ಷಣಿಕ ಸವಾಲುಗಳು:
ಶಾಲಾ ಶಿಕ್ಷಣ ಇಲಾಖೆಯ ಅಂಕಿಅಂಶಗಳನ್ನು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ 45,46,523 ಇದ್ದ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು, 2024-25ರ ವೇಳೆಗೆ 40,74,525ಕ್ಕೆ ಇಳಿದಿದೆ. ಕೇವಲ ಎರಡು ವರ್ಷಗಳಲ್ಲಿ ಸುಮಾರು 4.72 ಲಕ್ಷದಷ್ಟು ವಿದ್ಯಾರ್ಥಿಗಳ ದಾಖಲಾತಿ ಕುಸಿತ ಕಂಡಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶಿಕ್ಷಕರ ನೇಮಕಾತಿ, ಮೂಲಸೌಕರ್ಯ ವೃದ್ಧಿ ಮತ್ತು ನಿರಂತರ ತರಬೇತಿಯನ್ನು ಒಳಗೊಂಡ ಸಮಗ್ರ ಕ್ರಿಯಾ ಯೋಜನೆ ಅಗತ್ಯವಾಗಿದೆ ಎಂದಿದ್ದಾರೆ.
ಪತ್ರದಲ್ಲಿನ ಪ್ರಮುಖ 7 ಅಂಶಗಳ ಪ್ರಸ್ತಾವನೆಗಳು:
ಅಧಿಕೃತ ಪಾರಂಪರಿಕ ಶಾಲೆಗಳ ಘೋಷಣೆ: ರಾಜ್ಯಾದ್ಯಂತ 50 ವರ್ಷ ಮೇಲ್ಪಟ್ಟ ಶಾಲೆಗಳ ಸಮೀಕ್ಷೆ ನಡೆಸಿ, ಅಧಿಕೃತ ಪಟ್ಟಿಯೊಂದಿಗೆ ಅವುಗಳನ್ನು ‘ಪಾರಂಪರಿಕ ಶಾಲೆ’ಗಳೆಂದು ಘೋಷಿಸಬೇಕು.
ಶೈಕ್ಷಣಿಕ ಸ್ಮಾರಕ ಗ್ಯಾಲರಿ ಮತ್ತು ವಸ್ತುಸಂಗ್ರಹಾಲಯ: ಐತಿಹಾಸಿಕ ಶಾಲೆಗಳಲ್ಲಿ ಸಾಧಕರ ಭಾವಚಿತ್ರ, ಹಳೇ ದಾಖಲೆಗಳನ್ನು ಒಳಗೊಂಡ ಗ್ಯಾಲರಿಗಳನ್ನು ಸ್ಥಾಪಿಸಬೇಕು. ಸರ್ ಎಂ. ವಿಶ್ವೇಶ್ವರಯ್ಯ, ಡಾ. ಸಿ.ಎನ್.ಆರ್. ರಾವ್, ಮಾಜಿ ಸಿಎಂಗಳಾದ ಕಡಿದಾಳ್ ಮಂಜಪ್ಪ, ಎಸ್.ಎಂ. ಕೃಷ್ಣ ಅವರಂತಹ ಮಹನೀಯರ ಶೈಕ್ಷಣಿಕ ಹಿನ್ನೆಲೆಯನ್ನು ಇಲ್ಲಿ ಪರಿಚಯಿಸಬೇಕು.
ಆಧುನಿಕ ಮಾದರಿ ಶಾಲೆಗಳಾಗಿ ಮೇಲ್ದರ್ಜೆ: ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ವಿಶೇಷ ಅನುದಾನ ನೀಡಿ, ಅಲ್ಲಿ ಸ್ಮಾರ್ಟ್ ತರಗತಿ, ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯಗಳನ್ನು ನಿರ್ಮಿಸಬೇಕು. ಅಗತ್ಯಕ್ಕೆ ತಕ್ಕಂತೆ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಸಮಗ್ರ ಶಿಕ್ಷಣ ನೀಡುವ ಸಂಸ್ಥೆಗಳಾಗಿ ರೂಪಿಸಬೇಕು.
ಗುಣಮಟ್ಟದ ಇಂಗ್ಲಿಷ್ ಸಂವಹನ ಕಲಿಕೆ: ಕನ್ನಡವನ್ನು ಮುಖ್ಯ ಬೋಧನಾ ಮಾಧ್ಯಮವಾಗಿ ಉಳಿಸಿಕೊಂಡೇ, ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಉತ್ತಮ ಇಂಗ್ಲಿಷ್ ಸಂವಹನ ಕೌಶಲವನ್ನು ಕಲಿಸಿ ಪೋಷಕರಲ್ಲಿ ವಿಶ್ವಾಸ ಮೂಡಿಸಬೇಕು.
ಹಳೇ ವಿದ್ಯಾರ್ಥಿಗಳ ಸಹಭಾಗಿತ್ವ ಮತ್ತು ‘ನಮ್ಮ ಶಾಲೆ – ನಮ್ಮ ಹೆಮ್ಮೆ’ ನಿಧಿ: ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿ ಮತ್ತು ಹಳೇ ವಿದ್ಯಾರ್ಥಿಗಳ ನೆರವಿನಿಂದ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಪಾರದರ್ಶಕ ವ್ಯವಸ್ಥೆ ತರಬೇಕು.
ಶಿಕ್ಷಕರ ನೇಮಕಾತಿ ಮತ್ತು ತರಬೇತಿ: ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಿ, ಡಿಜಿಟಲ್ ಹಾಗೂ ಭಾಷಾ ಕಲಿಕೆಗೆ ಪೂರಕವಾಗಿ ಅವರಿಗೆ ನಿರಂತರ ವೃತ್ತಿಪರ ತರಬೇತಿ ನೀಡಬೇಕು.
ಸಮಗ್ರ ನೀತಿ ಜಾರಿ: ಈ ಎಲ್ಲ ಪ್ರಸ್ತಾವನೆಗಳನ್ನು ಬಿಡಿಬಡಿಯಾಗಿ ಜಾರಿಗೊಳಿಸುವ ಬದಲು, ಒಂದೇ ಛತ್ರಿಯಡಿ ‘ಕರ್ನಾಟಕ ಪಾರಂಪರಿಕ ಶಾಲಾ ಪುನಶ್ಚೇತನ ನೀತಿ’ ರೂಪಿಸಿ ಜಾರಿಗೆ ತರಬೇಕು.
ಮುಂಬರುವ ರಾಜ್ಯೋತ್ಸವದ ಸಂದರ್ಭದಲ್ಲಿ ಸರ್ಕಾರ ಈ ನೀತಿಯನ್ನು ಪ್ರಕಟಿಸುವ ಮೂಲಕ ನಾಡಿನ ಶೈಕ್ಷಣಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಅರ್ಥಪೂರ್ಣ ಹೆಜ್ಜೆ ಇರಿಸಬೇಕು ಎಂದು ದಿನೇಶ್ ಗೂಳೀಗೌಡ ಅವರು ಪತ್ರದಲ್ಲಿ ವಿನಂತಿಸಿದ್ದಾರೆ.

