ಬೆಂಗಳೂರು: ತೀವ್ರ ತಲೆನೋವಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲೂಕಿನ 28 ವರ್ಷದ ಯುವತಿ ಶ್ವೇತಾ ಚಿಕಿತ್ಸೆ ಫಲಕಾರಿಯಾಗದೆ ಮೆದುಳು ನಿಷ್ಕ್ರಿಯ (ಬ್ರೈನ್ ಡೆತ್) ಗೊಂಡ ಹಿನ್ನೆಲೆಯಲ್ಲಿ, ಅವರ ಕುಟುಂಬಸ್ಥರು ಸ್ವಯಂಪ್ರೇರಿತರಾಗಿ ಅಂಗಾಂಗ ದಾನ ಮಾಡುವ ಮೂಲಕ ಇಬ್ಬರು ರೋಗಿಗಳಿಗೆ ಹೊಸ ಬಾಳು ನೀಡಿದ್ದಾರೆ.
ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಶ್ವೇತಾ ತೀವ್ರ ತಲೆನೋವಿನಿಂದಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಬ್ರೈನ್ ಡೆತ್ ಆಗಿರುವುದಾಗಿ ವೈದ್ಯರು ದೃಢಪಡಿಸಿದ್ದರು. ಮಗಳ ಅಗಲಿಕೆಯ ತೀವ್ರ ದುಃಖದ ನಡುವೆಯೂ ಶ್ವೇತಾ ಅವರ ಪೋಷಕರು ಮಾನವೀಯತೆ ಮೆರೆದು, ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು.
ಅಂಗಾಂಗ ದಾನ ಪ್ರಕ್ರಿಯೆಯ ಮೂಲಕ ಶ್ವೇತಾ ಅವರ ಯಕೃತ್ (ಲಿವರ್) ಹಾಗೂ ಹೃದಯದ ಕವಾಟಗಳನ್ನು ಇಬ್ಬರು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಗಳಿಗೆ ಯಶಸ್ವಿಯಾಗಿ ಜೋಡಣೆ ಮಾಡಲಾಗಿದೆ. ವಿಶೇಷವೆಂದರೆ, ಶ್ವೇತಾ ಅವರು ಈ ಹಿಂದೆ ತಮ್ಮ ತಾಯಿಯಿಂದಲೇ ಒಂದು ಕಿಡ್ನಿಯನ್ನು ದಾನವಾಗಿ ಪಡೆದು ಜೀವನ ನಡೆಸುತ್ತಿದ್ದರು. ಹೀಗಾಗಿ ಅಂಗಾಂಗ ದಾನದ ಮಹತ್ವವನ್ನು ಹತ್ತಿರದಿಂದ ಅರಿತಿದ್ದ ಕುಟುಂಬಸ್ಥರು, ಮಗಳ ನಿಧನದ ತಕ್ಷಣವೇ ಈ ಮಹತ್ತರ ನಿರ್ಧಾರ ಕೈಗೊಂಡಿದ್ದಾರೆ.
ಆರೋಗ್ಯ ಇಲಾಖೆಯ ‘ಜೀವಸಾರ್ಥಕತೆ’ (SOTTO) ತಂಡ ಹಾಗೂ ಫೋರ್ಟಿಸ್ ಆಸ್ಪತ್ರೆಯ ಸಿಬ್ಬಂದಿ ಈ ಸಂಪೂರ್ಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮರಣದ ನಂತರವೂ ಮತ್ತೊಬ್ಬರ ಮೂಲಕ ಬದುಕುವ ಈ ಮಾನವೀಯ ಕಾರ್ಯವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಶ್ಲಾಘಿಸಿದ್ದು, ರಾಜ್ಯ ಸರ್ಕಾರದ ಹಾಗೂ ಸಾರ್ವಜನಿಕರ ಪರವಾಗಿ ಶ್ವೇತಾ ಅವರ ಕುಟುಂಬಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಸಾರ್ವಜನಿಕರು ‘ಜೀವಸಾರ್ಥಕತೆ’ ಪೋರ್ಟಲ್‌ನಲ್ಲಿ ಅಂಗಾಂಗ ದಾನಕ್ಕೆ ನೋಂದಾಯಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

