Thu. Oct 29th, 2026

ಸ್ಟಿಂಗ್ ಆಪರೇಷನ್ ಕೇಸ್: ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿಸಿಬಿ ತನಿಖೆಯಲ್ಲಿ ಕ್ಲೀನ್ ಚಿಟ್

Share this with Friends

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಸಿಬಿ ಸೈಬರ್ ಪೊಲೀಸರು ಅಧಿಕೃತವಾಗಿ ಕ್ಲೀನ್ ಚಿಟ್ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸ್ಟಿಂಗ್ ವಿಡಿಯೋದಲ್ಲಿನ ಎಲ್ಲಾ ವಿಚಾರಗಳು ಸಂಪೂರ್ಣವಾಗಿ ಕಟ್ಟುಕಥೆ ಎಂದು ಸಿಸಿಬಿ ತನ್ನ ತನಿಖಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಸಿಸಿಬಿ ಪೊಲೀಸರು ಹೊರಡಿಸಿರುವ ಅಧಿಕೃತ ಪ್ರಕಟಣೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ:

ಆರೋಪಗಳು ಕಟ್ಟುಕಥೆ: ವಿಡಿಯೋದಲ್ಲಿ ಬಿಂಬಿಸಲಾಗಿರುವ ಲೈಂಗಿಕ ದೌರ್ಜನ್ಯದ ಆರೋಪಗಳು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಸುಳ್ಳು ನಿರೂಪಣೆಯಾಗಿದ್ದು, ಇಂತಹ ಯಾವುದೇ ಘಟನೆ ನಡೆದಿರುವ ಬಗ್ಗೆ ತನಿಖೆಯಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಅಥವಾ ಹೇಳಿಕೆಗಳು ದೃಢಪಡಿಸುವುದಿಲ್ಲ.

ವ್ಯಕ್ತಿಗಳ ವಿಚಾರಣೆ: ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಲ್ಲಾ ವ್ಯಕ್ತಿಗಳನ್ನು ಪೊಲೀಸರು ಸಮಗ್ರವಾಗಿ ವಿಚಾರಣೆ ನಡೆಸಿದ್ದು, ವಿಡಿಯೋದಲ್ಲಿ ಸೂಚ್ಯವಾಗಿ ಆರೋಪಿಸಲಾದ ವ್ಯಕ್ತಿಗಳ ಮೇಲಿನ ಆರೋಪಗಳು ಕಟ್ಟುಕಥೆಯಿಂದ ಕೂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಮೊಬೈಲ್ ಜಪ್ತಿ ಮತ್ತು ಎಫ್‌ಎಸ್‌ಎಲ್ ಪರೀಕ್ಷೆ: ವಿಡಿಯೋ ಚಿತ್ರೀಕರಿಸಲು ಬಳಸಲಾದ ಮೂಲ ಮೊಬೈಲ್ ಫೋನ್ ಅನ್ನು ಪೊಲೀಸರು ಪತ್ತೆಹಚ್ಚಿ ಜಪ್ತಿ ಮಾಡಿದ್ದು, ವಿಡಿಯೋದ ನೈಜತೆಯನ್ನು ಪರಿಶೀಲಿಸಲು ವಿಧಿವಿಜ್ಞಾನ (FSL) ಪರೀಕ್ಷೆಗೆ ಒಳಪಡಿಸಲಾಗಿದೆ.

12 ವರ್ಷದ ಬಳಿಕ ಕೃತಕ ಚಿತ್ರೀಕರಣ: 2011ರಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಈ ವಿಡಿಯೋವನ್ನು ಸುಮಾರು 12 ವರ್ಷಗಳ ನಂತರ, ಅಂದರೆ 2023ರಲ್ಲಿ ಕೃತಕವಾಗಿ ಸೃಷ್ಟಿಸಲಾಗಿದೆಯೇ ಅಥವಾ ತಿರುಚಲಾಗಿದೆಯೇ ಎಂಬ ಬಗ್ಗೆ ತಾಂತ್ರಿಕ ತನಿಖೆ ಪ್ರಗತಿಯಲ್ಲಿದೆ.

ತೇಜೋವಧೆಯ ವ್ಯವಸ್ಥಿತ ಸಂಚು: ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳ ಘನತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತರುವ, ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವ ಹಾಗೂ ರಾಜಕೀಯ ವಿವಾದ ಸೃಷ್ಟಿಸುವ ದುರುದ್ದೇಶದಿಂದಲೇ ಈ ವಿಡಿಯೋವನ್ನು ಯೋಜಿತವಾಗಿ ಪ್ರಸಾರ ಮಾಡಿರುವ ಮಹತ್ವದ ಸುಳಿವುಗಳು ಲಭ್ಯವಾಗಿವೆ ಎಂದು ಸಿಸಿಬಿ ತಿಳಿಸಿದೆ.

ವಿಡಿಯೋವನ್ನು ಅನಾಮಧೇಯ ಖಾತೆಗಳು, ವಿಪಿಎನ್ (VPN) ತಂತ್ರಜ್ಞಾನ ಹಾಗೂ ನಕಲಿ ಡಿಜಿಟಲ್ ಗುರುತುಗಳನ್ನು ಬಳಸಿ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಲಾಗಿದ್ದು, ಪ್ರಕರಣದ ಸಂಪೂರ್ಣ ಲಿಂಕ್‌ಗಳನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದೆ.

 

 


Share this with Friends

Related Post