ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆ ಏರಿಕೆ ಆದೇಶ ಹೊರಬಿದ್ದ ಬೆನ್ನಲ್ಲೇ ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಮುನ್ಸೂಚನೆ ಸಿಕ್ಕಿದೆ. ಹಾಲಿನ ದರ ಹೆಚ್ಚಳದ ಹೊರೆಯನ್ನು ಸರಿದೂಗಿಸಲು ಹೋಟೆಲ್ ಮಾಲೀಕರು ಕಾಫಿ, ಟೀ ಹಾಗೂ ದಿನನಿತ್ಯದ ತಿಂಡಿಗಳ ಬೆಲೆಯನ್ನು ಹೆಚ್ಚಿಸಲು ಚಿಂತನೆ ನಡೆಸುತ್ತಿದ್ದಾರೆ.
ಇಂದಷ್ಟೇ ನಂದಿನಿ ಹಾಲಿನ ದರ ಲೀಟರ್‌ಗೆ 8 ರೂ. ಹೆಚ್ಚಳದ ನಿರ್ಧಾರ ಹೊರಬಿದ್ದಿದ್ದು,ಹೋಟೆಲ್ ಉದ್ಯಮದ ಮೇಲೆ ನೇರ ಪರಿಣಾಮ ಬೀರುವ ಆರಂಕ ಎದುರಾಗಿದೆ. ಕಾಫಿ, ಟೀ, ವಿವಿಧ ಬಗೆಯ ಪಾಯಸ, ಸಿಹಿ ತಿನಿಸುಗಳು ಹಾಗೂ ಬೆಳಗಿನ ಉಪಾಹಾರ ತಯಾರಿಕೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳು ಅತಿ ಮುಖ್ಯವಾಗಿ ಬೇಕಾಗಿರುವುದರಿಂದ, ಹೋಟೆಲ್ ನಿರ್ವಹಣಾ ವೆಚ್ಚ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರ ಜೇಬಿಗೆ ಕತ್ತರಿ:
ಪ್ರಸ್ತುತ ಮಾರುಕಟ್ಟೆಯಲ್ಲಿ ಹಾಲಿನ ದರ ಹೆಚ್ಚಳದ ಜೊತೆಗೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್, ದಿನಬಳಕೆಯ ತರಕಾರಿ ಮತ್ತು ಅಗತ್ಯ ಆಹಾರ ಪದಾರ್ಥಗಳ ಬೆಲೆಯೂ ಏರುಗತಿಯಲ್ಲಿದೆ. ಈ ಎಲ್ಲಾ ಆರ್ಥಿಕ ಹೊರೆಗಳನ್ನು ತಾವೊಬ್ಬರೇ ಭರಿಸಲು ಸಾಧ್ಯವಿಲ್ಲದ ಕಾರಣ, ಅನಿವಾರ್ಯವಾಗಿ ಕಾಫಿ ಮತ್ತು ಟೀ ಬೆಲೆಯನ್ನು ₹2 ರಿಂದ ₹3 ರವರೆಗೆ ಹಾಗೂ ತಿಂಡಿಗಳ ಬೆಲೆಯನ್ನು ಶೇ. 10 ರಿಂದ ಶೇ. 15 ರಷ್ಟು ಹೆಚ್ಚಿಸಲು ಹೋಟೆಲ್ ಉದ್ಯಮಿಗಳು ಮುಂದಾಗಿದ್ದಾರೆ.ಹಾಲಿನ ದರ 8 ರೂ. ಬದಲು 2-3 ರೂ ಮಾತ್ರ ಹೆಚ್ಚಿಸಿದಲ್ಲಿ ಸಧ್ಯಕ್ಕೆ ದರ ಪರಿಷ್ಕರಣೆ ಮಾಡಲ್ಲ, ಇಲ್ಲದೇ ಇದ್ದಲ್ಲಿ ದರ ಪರಿಷ್ಕರಣೆ ಅನುವಾರ್ಯ ಎಂದು ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ದರ ಏರಿಕೆ ಪ್ರಸ್ತಾವನೆಯು ಜಾರಿಗೆ ಬಂದರೆ, ಪ್ರತಿದಿನ ಬೆಳಿಗ್ಗೆ ಹೋಟೆಲ್‌ಗಳನ್ನು ಅವಲಂಬಿಸಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ, ವಿಶೇಷವಾಗಿ ಉದ್ಯೋಗಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಭಾರಿ ಆರ್ಥಿಕ ಹೊರೆಯಾಗಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಹೋಟೆಲ್ ತಿಂಡಿ ತಿನಿಸುಗಳ ದರ ಹೆಚ್ಚಳವು ‘ಗಾಯದ ಮೇಲೆ ಉಪ್ಪು ಸವರಿದಂತೆ’ ಆಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

