Mon. Nov 2nd, 2026

ಪೆನ್ ಡ್ರೈವ್ ಹಗರಣದ ಆರೋಪಿ ಕಾರ್ತಿಕ್ ಜತೆ ಸಿಎಂ ಡಿ.ಕೆ. ಶಿವಕುಮಾರ್ ನಂಟು: ಸಿಡಿಆರ್ ದಾಖಲೆ ಬಿಡುಗಡೆ ಮಾಡಿದ ಹೆಚ್.ಡಿ. ಕುಮಾರಸ್ವಾಮಿ

Share this with Friends

ಬೆಂಗಳೂರು: ಹಾಸನದ ಅಶ್ಲೀಲ ವೀಡಿಯೋ ಹಗರಣದ ಎರಡನೇ ಆರೋಪಿ, ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನೇರ ನಂಟಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ  ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರ ನಡುವಿನ ಭೇಟಿಗೆ ಸಂಬಂಧಿಸಿದ ಸಿಡಿಆರ್ (ಕರೆ ವಿವರಗಳ ದಾಖಲೆ) ಪುರಾವೆಗಳನ್ನು ಬಹಿರಂಗಪಡಿಸಿದರು.

ಅಶ್ಲೀಲ ವಿಡಿಯೋ ಬಿಡುಗಡೆಗೂ ಮುನ್ನವೇ ಭೇಟಿ:

ಲೈಂಗಿಕ ದೌರ್ಜನ್ಯದ ವೀಡಿಯೋಗಳು ಸಾರ್ವಜನಿಕವಾಗಿ ಹೊರಬರುವುದಕ್ಕೂ ಮುಂಚಿತವಾಗಿ, ಅಂದರೆ 2023ರ ಆಗಸ್ಟ್ 5 ಮತ್ತು 6 ರಂದೇ ಆರೋಪಿ ಕಾರ್ತಿಕ್ ಅಂದಿನ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಕ್ಕೆ ಸ್ಪಷ್ಟ ದಾಖಲೆಗಳಿವೆ ಎಂದು ಕುಮಾರಸ್ವಾಮಿ ಹೇಳಿದರು. ಪೆನ್ ಡ್ರೈವ್ ಹರಡಿದ ಪ್ರಕರಣದ ಹಿಂದೆ ಕಾರ್ತಿಕ್ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರ ಜಂಟಿ ಸಂಚು ಅಡಗಿದೆ ಎಂದು ಅವರು ದೂರಿದರು. “ಆರೋಪಿ ಕಾರ್ತಿಕ್‌ನನ್ನು ನಾನು ಮನೆಗೆ ಕರೆಸಿಕೊಂಡಿರಲಿಲ್ಲ ಎಂದು ಮುಖ್ಯಮಂತ್ರಿಗಳು ತಮ್ಮ ಎದೆ ಮುಟ್ಟಿಕೊಂಡು ಹೇಳಲಿ” ಎಂದು ಸವಾಲು ಹಾಕಿದ ಅವರು, ಈ ಬಗ್ಗೆ ಸಿಎಂ ಬಹಿರಂಗ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.

ಮೈತ್ರಿ ಮುರಿಯಲು ಕಾಂಗ್ರೆಸ್ ಹಿರಿಯ ನಾಯಕರ ಕುತಂತ್ರ:

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಹತ್ತಿಕ್ಕಲು ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ತಡೆಯಲು ಕಾಂಗ್ರೆಸ್ ಈ ಅಶ್ಲೀಲ ವೀಡಿಯೊಗಳನ್ನು ಅಸ್ತ್ರವಾಗಿ ಬಳಸಿಕೊಂಡಿದೆ. ರಾಹುಲ್ ಗಾಂಧಿ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಕಾಂಗ್ರೆಸ್‌ನ ಉನ್ನತ ನಾಯಕರು ಜೆಡಿಎಸ್ ನಿರ್ನಾಮ ಮಾಡಲು ಜಂಟಿ ಷಡ್ಯಂತ್ರ್ಯ ರೂಪಿಸಿದ್ದರು ಎಂದು ಹೆಚ್‌ಡಿಕೆ ಆರೋಪಿಸಿದರು. ಸಂತ್ರಸ್ತ ಮಹಿಳೆಯರ ಮುಖಗಳನ್ನು ಮರೆಮಾಚದೆ ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚುವ ಮೂಲಕ ಸರ್ಕಾರ ಮಹಿಳೆಯರ ಘನತೆಗೆ ಧಕ್ಕೆ ತಂದಿದೆ. ಇಷ್ಟು ದಿನ ಕಳೆದರೂ ಎಷ್ಟು ಜನ ಮಹಿಳೆಯರಿಗೆ ಈ ಸರ್ಕಾರ ನ್ಯಾಯ ಒದಗಿಸಿದೆ ಎಂದು ಅವರು ಪ್ರಶ್ನಿಸಿದರು.

ಈ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಸಿ.ಎನ್. ಮಂಜೇಗೌಡ ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.


Share this with Friends

Related Post