ಬೆಂಗಳೂರು: ವಕೀಲರ ಮೇಲಿನ ಸರಣಿ ದಾಳಿಗಳನ್ನು ಖಂಡಿಸಿ ಹಾಗೂ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿ ನವೆಂಬರ್ 3ರ ಮಂಗಳವಾರದಂದು ರಾಜ್ಯಾದ್ಯಂತ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ನಡೆಸಲು ಬೆಂಗಳೂರು ವಕೀಲರ ಸಂಘ (AAB) ತೀರ್ಮಾನಿಸಿದೆ.
ಪ್ರೆಸ್ ಕ್ಲಬ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಅವರು ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಕಾನೂನು ವೃತ್ತಿಪರರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಬೆದರಿಕೆಗಳನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ. ಅಕ್ಟೋಬರ್ 29 ರಂದು ನಡೆದ ಸಂಘದ ಮಹಾಸಭೆಯಲ್ಲಿ ಕೈಗೊಂಡ ಒಮ್ಮತದ ನಿರ್ಧಾರದಂತೆ, ನಾಳೆ (ನವೆಂಬರ್ 3) ವಕೀಲರೆಲ್ಲರೂ ಕೋರ್ಟ್ ಕಲಾಪಗಳಿಂದ ಸಂಪೂರ್ಣವಾಗಿ ದೂರ ಉಳಿಯುವ ಮೂಲಕ ತಮ್ಮ ಆಕ್ರೋಶವನ್ನು ದಾಖಲಿಸಲಿದ್ದಾರೆ ಎಂದರು.
ವಕೀಲರ ಸಂರಕ್ಷಣಾ ಕಾಯ್ದೆ ಗಟ್ಟಿಗೊಳಿಸಲು ಆಗ್ರಹ:
ಪ್ರತಿಭಟನೆಯ ಮುಖ್ಯ ಉದ್ದೇಶ ವಕೀಲರ ರಕ್ಷಣೆಯಾಗಿದೆ. ಸದ್ಯ ಚಾಲ್ತಿಯಲ್ಲಿರುವ ‘ವಕೀಲರ ಸಂರಕ್ಷಣಾ ಕಾಯ್ದೆ’ಯನ್ನು (Advocates Protection Act) ಮತ್ತಷ್ಟು ಬಲಪಡಿಸಬೇಕು. ಅದರಲ್ಲಿ ಕಠಿಣ ಶಾಸನಾತ್ಮಕ ನಿಬಂಧನೆಗಳನ್ನು ಸೇರಿಸುವ ಮೂಲಕ ಕಾನೂನು ವೃತ್ತಿ ನಡೆಸುವವರಿಗೆ ಯಾವುದೇ ಭಯವಿಲ್ಲದೆ ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣವನ್ನು ಸರ್ಕಾರ ನಿರ್ಮಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯಾದ್ಯಂತ ಬೆಂಬಲಕ್ಕೆ ಕರೆ:
ನ್ಯಾಯದಾನ ವ್ಯವಸ್ಥೆಯು ಮುಕ್ತವಾಗಿ ಕಾರ್ಯನಿರ್ವಹಿಸಲು ವಕೀಲರ ಸುರಕ್ಷತೆ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಇರುವ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಕೀಲರ ಸಂಘಗಳು ನಾಳಿನ ಪ್ರತಿಭಟನೆಗೆ ಕೈಜೋಡಿಸಿ, ಕಲಾಪ ಬಹಿಷ್ಕಾರ ಚಳವಳಿಯನ್ನು ಯಶಸ್ವಿಗೊಳಿಸಬೇಕು ಎಂದು ವಿವೇಕ್ ಸುಬ್ಬಾರೆಡ್ಡಿ ಮನವಿ ಮಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಪ್ರವೀಣ್ ಗೌಡ, ಉಪಾಧ್ಯಕ್ಷ ಗಿರೀಶ್ ಕುಮಾರ್ ಸಿ.ಎಸ್. ಹಾಗೂ ಖಜಾಂಚಿ ಶ್ವೇತಾ ರವಿಶಂಕರ್ ಉಪಸ್ಥಿತರಿದ್ದು, ವಕೀಲರ ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡಿದರು.

