ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೈಹಿಕ ಹಲ್ಲೆ, ಬೆದರಿಕೆ ಹಾಗೂ ಹಿಂಸಾಚಾರದ ಘಟನೆಗಳನ್ನು ಖಂಡಿಸಿ ಬೆಂಗಳೂರು ವಕೀಲರ ಸಂಘ (AAB) ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ (KSBC) ಜಂಟಿ ಆಶ್ರಯದಲ್ಲಿ ಹೈಕೋರ್ಟ್ ಮುಂಭಾಗ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಈ ಬೃಹತ್ ಪ್ರತಿಭಟನಾ ಆಂದೋಲನದ ನೇತೃತ್ವ ವಹಿಸಿ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಹಾಗೂ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ವಿವೇಕ್ ಸುಬ್ಬಾರೆಡ್ಡಿ ಅವರು, “ನ್ಯಾಯದಾನ ವ್ಯವಸ್ಥೆಯಲ್ಲಿ ಪ್ರಮುಖ ಅಂಗವಾಗಿರುವ ವಕೀಲರ ಮೇಲಿನ ಸರಣಿ ಹಲ್ಲೆಗಳು ಕಾನೂನು ಸುವ್ಯವಸ್ಥೆಗೆ ಸವಾಲಾಗಿವೆ. ವಕೀಲರು ಯಾವುದೇ ಭಯವಿಲ್ಲದೆ ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಸರ್ಕಾರ ತಕ್ಷಣವೇ ಸೂಕ್ತ ರಕ್ಷಣೆ ಒದಗಿಸಬೇಕು ಮತ್ತು ವಕೀಲರ ರಕ್ಷಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು” ಎಂದು ಪ್ರಬಲವಾಗಿ ಒತ್ತಾಯಿಸಿದರು.
ರಾಜಧಾನಿ ಬೆಂಗಳೂರಿನ ವಿವಿಧ ನ್ಯಾಯಾಲಯಗಳ ವಿಭಾಗಗಳಿಗೆ ಸೇರಿದ ನೂರಾರು ವಕೀಲರು ಹೈಕೋರ್ಟ್ ಆವರಣದ ಮುಂಭಾಗ ಜಮಾಯಿಸಿ, ವಕೀಲರ ಸುರಕ್ಷತೆಗೆ ಕಾಂಕ್ರೀಟ್ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಘೋಷಣೆಗಳ ಮೂಲಕ ಆಗ್ರಹಿಸಿದರು.
ಈ ಬೃಹತ್ ಧರಣಿಯಲ್ಲಿ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ರಾಜಣ್ಣ, ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಗೌಡ, ಉಪಾಧ್ಯಕ್ಷ ಗಿರೀಶ್ ಕುಮಾರ್ ಹಾಗೂ ಖಜಾಂಚಿ ಶ್ವೇತಾ ರವಿಶಂಕರ್ ಪಾಲ್ಗೊಂಡಿದ್ದರು. ಇವರೊಂದಿಗೆ ವಕೀಲರ ಪರಿಷತ್ತಿನ ಪದಾಧಿಕಾರಿಗಳು, ಸಂಘದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ನ್ಯಾಯವಾದಿಗಳು ಒಗ್ಗಟ್ಟು ಪ್ರದರ್ಶಿಸಿದರು. ವಕೀಲರ ಸುರಕ್ಷತೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ವಕೀಲರ ಒಕ್ಕೂಟ ಎಚ್ಚರಿಸಿದೆ.

