ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯು ಸಂಪೂರ್ಣವಾಗಿ ದಾರಿ ತಪ್ಪಿದ್ದು, ಸರ್ಕಾರಕ್ಕೆ ಬೇಕಾದಂತೆ ತೇಪೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರ ಏಕಪಕ್ಷೀಯ ತನಿಖೆಯ ನಡೆ ಹಾಗೂ ಪೊಲೀಸ್ ಆಯುಕ್ತರ ಹೇಳಿಕೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೇರಳ ಮಹಿಳೆ ನ್ಯಾಯಾಲಯಕ್ಕೆ ಹಾಜರುಪಡಿಸದಿದ್ದಕ್ಕೆ ಪ್ರಶ್ನೆ:
ಸ್ಟಿಂಗ್ ವಿಡಿಯೋದಲ್ಲಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದ ಕೇರಳ ಮೂಲದ ಮಹಿಳೆ, ಇದೀಗ ತನ್ನ ಹೇಳಿಕೆ ಬದಲಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಒಂದು ವೇಳೆ ಆಕೆ ಹೇಳಿಕೆ ಬದಲಿಸಿದ್ದರೆ, ತನಿಖಾಧಿಕಾರಿಗಳು ಆಕೆಯನ್ನು ತಂದು ನ್ಯಾಯಾಲಯದ ಮುಂದೆ ಏಕೆ ಹಾಜರುಪಡಿಸಿಲ್ಲ? ಹೇಳಿಕೆ ಬದಲಿಸಿದ ತಕ್ಷಣ ಆಕೆಯೂ ಈ ಪಿತೂರಿಯ ಭಾಗವಾಗುವುದರಿಂದ, ಆಕೆಯನ್ನು ಪ್ರಕರಣದಲ್ಲಿ ಆರೋಪಿ ಎಂದು ಏಕೆ ಹೆಸರಿಸಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘನೆ ಆರೋಪ:
ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಪೊಲೀಸ್ ಆಯುಕ್ತರು ತನಿಖೆಯ ವಿವರಗಳನ್ನು ಬಹಿರಂಗಪಡಿಸುತ್ತಿರುವುದು ಸುಪ್ರೀಂ ಕೋರ್ಟ್ನ ಸ್ಪಷ್ಟ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಮುಖ್ಯಮಂತ್ರಿಗಳನ್ನು ಓಲೈಸಲು ಮತ್ತು ಅವರಿಗೆ ‘ಕ್ಲೀನ್ ಚಿಟ್’ ನೀಡಲು ಪೊಲೀಸರು ತರಾತುರಿ ಮಾಡುತ್ತಿದ್ದಾರೆ. ಪೊಲೀಸರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಹಾಗೂ ಆಯುಕ್ತರ ಹೇಳಿಕೆಗಳಲ್ಲೇ ಸಾಕಷ್ಟು ಪರಸ್ಪರ ವೈರುಧ್ಯಗಳಿವೆ ಎಂದು ಅವರು ದೂರಿದರು. ತನಿಖಾ ಹಂತದಲ್ಲಿ ಇನ್ಸ್ಪೆಕ್ಟರ್ ಮಟ್ಟದ ಅಧಿಕಾರಿಯನ್ನು ಬದಲಾಯಿಸಿರುವುದು ತನಿಖೆಯ ನಿಷ್ಪಕ್ಷಪಾತತೆಯನ್ನು ಸಂಶಯಕ್ಕೀಡು ಮಾಡಿದೆ ಎಂದರು.
ಅಸಲಿ ಆರೋಪಿಗಳ ಬಂಧನಕ್ಕೆ ಆಗ್ರಹ:
“ಕೇರಳಕ್ಕೆ ಹೋಗಿ ಸ್ಟಿಂಗ್ ಮಾಡಿದ್ದು ನಾನೇ, ವಿಡಿಯೋದಲ್ಲಿರುವ ಧ್ವನಿ ನನ್ನದೇ” ಎಂದು ಬಹಿರಂಗವಾಗಿ ಒಪ್ಪಿಕೊಂಡಿರುವ ವ್ಯಕ್ತಿಯನ್ನು ಪೊಲೀಸರು ಇನ್ನೂ ಏಕೆ ಬಂಧಿಸಿಲ್ಲ? ಪ್ರಕರಣದಲ್ಲಿ ರಾಕೇಶ್ ಶೆಟ್ಟಿ ಮತ್ತು ಕೃಪಾ ಆಳ್ವ ಅವರ ಹೆಸರುಗಳು ಕೇಳಿಬಂದಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸದಿರುವುದು ತನಿಖೆಯ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ಕಿಡಿಕಾರಿದರು.
ಕಾರ್ಯಕರ್ತರ ಬೆದರಿಕೆಗೆ ಎಚ್ಚರಿಕೆ:
ತನಿಖೆಯ ನೆಪದಲ್ಲಿ ಜೆಡಿಎಸ್ ಸೋಶಿಯಲ್ ಮೀಡಿಯಾ ವಿಭಾಗದ ಯುವ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿ, ಅವರ ಕುಟುಂಬದವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಕೇವಲ ವಿಡಿಯೋ ಅಪ್ಲೋಡ್ ಮಾಡಿದ ನೆಪ ಇಟ್ಟುಕೊಂಡು ನಮ್ಮ ಕಾರ್ಯಕರ್ತರನ್ನು ಬೆದರಿಸುವ ತಂತ್ರ ನಡೆಯುತ್ತಿದೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ ಎಂದು ಸಚಿವರು ಎಚ್ಚರಿಸಿದರು.
ಇದೇ ವೇಳೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಸಲೀಂ ಅವರಿಗೆ ಮಾರ್ಮಿಕವಾಗಿ ಎಚ್ಚರಿಕೆ ನೀಡಿದ ಸಚಿವರು, “ಅಧಿಕಾರದಲ್ಲಿ ಚಕ್ರ ಉರುಳುತ್ತಿರುತ್ತದೆ. ಮೇಲೆ ಇದ್ದವರು ಕೆಳಗೆ ಬರಲೇಬೇಕು. ಸರ್ಕಾರದ ಒತ್ತಡಕ್ಕೆ ಮಣಿದು ಮರ್ಜಿಗೆ ಕೆಲಸ ಮಾಡಿದರೆ ಅಧಿಕಾರಿಗಳೇ ಅಪಾಯಕ್ಕೆ ಸಿಲುಕಬೇಕಾಗುತ್ತದೆ” ಎಂದು ನೇರ ಎಚ್ಚರಿಕೆ ನೀಡಿದರು

