ಬೆಂಗಳೂರು: ಸಿಲಿಕಾನ್ ಸಿಟಿಯ ಜಿಬಿಎ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟದ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆಯುತ್ತಿರುವ ಕಳಪೆ ವೈಟ್‌ಟಾಪಿಂಗ್ ರಸ್ತೆ ನಿರ್ಮಾಣವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಅವರು ಜಿಬಿಎ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಸಚಿವರು, ಜ್ಞಾನಾಕ್ಷಿ ಗ್ಲೋಬಲ್ ಸ್ಕೂಲ್ (ಜಿ.ಎಸ್.ಎಲ್) ವಿಭಾಗದಿಂದ ಎಚ್‌ಎಸ್‌ಆರ್ ಲೇಔಟ್ 1ನೇ ಹಂತದ 14ನೇ ಮುಖ್ಯ ರಸ್ತೆಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಯು ತೀರಾ ಕಳಪೆ ಮಟ್ಟದ್ದಾಗಿದೆ. ಹೀಗಾಗಿ ಕೆಲಸವನ್ನು ತಕ್ಷಣ ನಿಲ್ಲಿಸಿ, ಹೊಣೆಗಾರ ಗುತ್ತಿಗೆದಾರರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು ಎಂದು ಆದೇಶಿಸಿದ್ದಾರೆ.
ಸ್ಥಳ ಪರಿಶೀಲನೆ ವೇಳೆ ಬಯಲಾದ ಬೇಜವಾಬ್ದಾರಿತನ:
ತಮ್ಮ ಸ್ವಕ್ಷೇತ್ರ ವ್ಯಾಪ್ತಿಯ ಈ ರಸ್ತೆಯಲ್ಲಿ ಕೈಗೊಳ್ಳಲಾಗಿರುವ 1.2 ಮೀಟರ್ ಡಯಾದ ಬೃಹತ್ ಮಳೆನೀರು ಗಾಲುವೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವರು ಖುದ್ದಾಗಿ ಪರಿಶೀಲಿಸಿದಾಗ ಗುತ್ತಿಗೆದಾರರ ಬೇಜವಾಬ್ದಾರಿತನ ಬೆಳಕಿಗೆ ಬಂದಿದೆ. ನಿಯಮಾವಳಿಗಳನ್ನು ಗಾಳಿಗೆ ತೂರಿ, ಕಳಪೆ ಸಾಮಗ್ರಿ ಬಳಸಿ ರಸ್ತೆ ನಿರ್ಮಿಸುತ್ತಿರುವುದು ಸ್ಥಳ ಪರಿಶೀಲನೆ ವೇಳೆ ದೃಢಪಟ್ಟಿದೆ.
ಸ್ಥಳೀಯರ ಬದುಕು ಹೈರಾಣ:
ಅಸಮರ್ಪಕ ಕಾಮಗಾರಿಯಿಂದಾಗಿ ಇಡೀ ಬಡಾವಣೆಯ ಒಳಚರಂಡಿ (ಯುಜಿಡಿ) ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಕುಡಿಯುವ ನೀರಿನ ಪೈಪ್‌ಲೈನ್‌ಗಳು ಒಡೆದು ಹೋಗಿದ್ದು, ಇಡೀ ರಸ್ತೆಯೇ ಸಂಚಾರಕ್ಕೆ ಅಯೋಗ್ಯವಾಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ದಿನನಿತ್ಯ ನರಕಯಾತನೆ ಅನುಭವಿಸುವಂತಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಜಿ.ಎಸ್.ಎಲ್ ಸಂಸ್ಥೆಯ ಇಂಜಿನಿಯರ್‌ಗಳ ಗಮನಕ್ಕೆ ತಂದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಚಿವರು ಪತ್ರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಹೀಗಾಗಿ, ಹಿರಿಯ ಅಧಿಕಾರಿಗಳ ತಂಡದಿಂದ ಕಾಮಗಾರಿಯ ಗುಣಮಟ್ಟದ ಮರುಪರಿಶೀಲನೆ ನಡೆಯುವವರೆಗೂ ರಸ್ತೆ ಕೆಲಸಕ್ಕೆ ಬ್ರೇಕ್ ಹಾಕಬೇಕು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ತಕ್ಷಣವೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಪಾಲಿಕೆ ಆಯುಕ್ತರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

