ಹುಬ್ಬಳ್ಳಿ: ನೈಋತ್ಯ ರೈಲ್ವೆಯು (SWR) ಸರಕು ಸಾಗಣೆ ಹಾಗೂ ಆದಾಯ ಗಳಿಕೆಯಲ್ಲಿ ಸಾರ್ವಕಾಲಿಕ ಹೊಸ ದಾಖಲೆ ಬರೆದಿದೆ. ಪ್ರಸಕ್ತ ಸಾಲಿನ ಅಕ್ಟೋಬರ್ ತಿಂಗಳೊಂದರಲ್ಲೇ ವಲಯವು ಭರ್ಜರಿ 5.5 ಮಿಲಿಯನ್ ಟನ್ (MT) ಸರಕು ಸಾಗಣೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. ಕಳೆದ ವರ್ಷದ ಇದೇ ಅವಧಿಗೆ (4.2 MT) ಹೋಲಿಸಿದರೆ ಇದು ಶೇ. 31ರಷ್ಟು ಭಾರಿ ಬೆಳವಣಿಗೆಯಾಗಿದ್ದು, ನೈಋತ್ಯ ರೈಲ್ವೆ ವಲಯ ರಚನೆಯಾದ ನಂತರ ಒಂದೇ ತಿಂಗಳಲ್ಲಿ ದಾಖಲಾದ ಅತ್ಯಧಿಕ ಸಾಧನೆಯಾಗಿದೆ.
ಸರಕು ಸಾಗಣೆ ಹಾಗೂ ಪ್ರಯಾಣಿಕರ ಸಂಚಾರದ ದಟ್ಟಣೆಯಿಂದಾಗಿ ಅಕ್ಟೋಬರ್ನಲ್ಲಿ ವಲಯಕ್ಕೆ ಒಟ್ಟು 928 ಕೋಟಿ ಆದಾಯ ಹರಿದು ಬಂದಿದೆ. ಇದು ಕಳೆದ ವರ್ಷಕ್ಕಿಂತ ಶೇ. 20ರಷ್ಟು ಹೆಚ್ಚಳ ಕಂಡಿರುವುದಲ್ಲದೆ, ರೈಲ್ವೆ ಇಲಾಖೆ ನಿಗದಿಪಡಿಸಿದ್ದ 895 ಕೋಟಿ ಮಾಸಿಕ ಗುರಿಗಿಂತಲೂ ಶೇ. 3.7ರಷ್ಟು ಅಧಿಕವಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಸರಕು ಸಾಗಣೆಯ ಪ್ರಮುಖ ಮುಖ್ಯಾಂಶಗಳು:
ಕಲ್ಲಿದ್ದಲು ಸಾಗಣೆ ದಾಖಲೆ: ಕಲ್ಲಿದ್ದಲು ಲೋಡಿಂಗ್ 0.80 MTನಿಂದ 1.37 MTಗೆ (ಶೇ. 71ರಷ್ಟು ಪ್ರಗತಿ) ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಇತರ ಸರಕುಗಳು: ಕಬ್ಬಿಣ ಮತ್ತು ಉಕ್ಕು ಸಾಗಣೆ 1.10 MT, ಖನಿಜ ತೈಲ 0.23 MT, ರಸಗೊಬ್ಬರ 0.15 MT ಹಾಗೂ ಕಂಟೇನರ್ ಸಾಗಣೆ 0.10 MTಗೆ ಹೆಚ್ಚಳ ಕಂಡು ಗಮನಾರ್ಹ ಪ್ರಗತಿ ಸಾಧಿಸಿದೆ.
ಸಂಚಿತ ಸಾಧನೆ: ಏಪ್ರಿಲ್ನಿಂದ ಅಕ್ಟೋಬರ್ವರೆಗಿನ 7 ತಿಂಗಳ ಅವಧಿಯಲ್ಲಿ ಒಟ್ಟು 31.56 MT ಸರಕು ಸಾಗಿಸಲಾಗಿದ್ದು, ಒಟ್ಟು ಸರಕು ಆದಾಯ ₹3,031 ಕೋಟಿಗೆ ತಲುಪಿದೆ.
1.7 ಕೋಟಿ ಪ್ರಯಾಣಿಕರ ಸಂಚಾರ:
ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 1.7 ಕೋಟಿ ಜನರು ನೈಋತ್ಯ ರೈಲ್ವೆ ಮೂಲಕ ಪ್ರಯಾಣಿಸಿದ್ದು, ಇದರಿಂದ ಇಲಾಖೆಗೆ ₹358 ಕೋಟಿ ಆದಾಯ ಲಭಿಸಿದೆ (ಶೇ. 19ರಷ್ಟು ಹೆಚ್ಚಳ). ಟಿಕೆಟ್ ತಪಾಸಣೆಯಿಂದಲೇ ದಾಖಲೆಯ 8.3 ಕೋಟಿ ದಂಡದ ರೂಪದಲ್ಲಿ ವಸೂಲಾಗಿದೆ. ಇನ್ನು ಪಾರ್ಸೆಲ್ ವಿಭಾಗದಿಂದ 17 ಕೋಟಿ ಆದಾಯ ಹರಿದುಬಂದಿದೆ.
ಏಪ್ರಿಲ್-ಅಕ್ಟೋಬರ್ ಒಟ್ಟು ಆದಾಯ 5,620 ಕೋಟಿ:
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ನಿಂದ ಅಕ್ಟೋಬರ್ವರೆಗಿನ ಒಟ್ಟು ಸಂಚಿತ ಆದಾಯ 5,620 ಕೋಟಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಗೆ (5,282 ಕೋಟಿ) ಹೋಲಿಸಿದರೆ ಶೇ. 6.4ರಷ್ಟು ವೃದ್ಧಿಯಾಗಿದೆ. ಈ 7 ತಿಂಗಳಲ್ಲಿ ಒಟ್ಟು 10.9 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, ಪ್ರಯಾಣಿಕರ ವಿಭಾಗದಿಂದ 2,263 ಕೋಟಿ ಆದಾಯ ಸಂಗ್ರಹವಾಗಿದೆ.
ಸರಕು ಸಾಗಣೆ, ಕಾರ್ಯಾಚರಣೆ ಹಾಗೂ ಆದಾಯ ಗಳಿಕೆಯಲ್ಲಿ ಈ ಅಭೂತಪೂರ್ವ ಮೈಲಿಗಲ್ಲು ಸ್ಥಾಪಿಸಲು ಶ್ರಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವನ್ನು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ (GM) ಪಿ. ಅನಂತ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

