Tue. Nov 3rd, 2026

2028ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿಶ್ಚಿತ; ವಿರೋಧ ಪಕ್ಷಗಳದ್ದು ಬರೀ ಖಾಲಿ ಡಬ್ಬಾ ರಾಜಕಾರಣ: ಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

Share this with Friends

ಚಿತ್ರದುರ್ಗ (ಹಿರಿಯೂರು): “ರಾಜ್ಯದಲ್ಲಿ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವೇ ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಎನ್‌ಡಿಎ ನಾಯಕರದ್ದು ಕೇವಲ ಖಾಲಿ ಮಾತು ಮತ್ತು ಖಾಲಿ ಡಬ್ಬಾ ರಾಜಕಾರಣ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹಿರಿಯೂರು ತಾಲ್ಲೂಕಿನ ಧರ್ಮಪುರದಲ್ಲಿ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಮಂಗಳವಾರ (ನವೆಂಬರ್ 3) ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಹಿರಿಯೂರು ವಿಧಾನಸಭಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಜಂಟಿ ಪ್ರಚಾರ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ವಿರುದ್ಧ ಅವರು ರಾಜಕೀಯ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂಗಳ ಮಕ್ಕಳನ್ನು ಜನ ಸೋಲಿಸಿದ್ದಾರೆ:

ಉಪ ಚುನಾವಣೆಗಳ ಇತಿಹಾಸವನ್ನು ಸ್ಮರಿಸಿದ ಮುಖ್ಯಮಂತ್ರಿಗಳು, “ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಜನರೇ ತಿರಸ್ಕರಿಸಿ ಸೋಲಿಸಿದ್ದಾರೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಪುತ್ರನ ವಿರುದ್ಧ ಯೋಗೇಶ್ವರ್ ಅವರು ಹಾಗೂ ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಪುತ್ರನ ವಿರುದ್ಧ ನಮ್ಮ ಪಠಾಣ್ ಗೆಲುವು ಸಾಧಿಸಿದರು. ಹಿರಿಯೂರು ಉಪ ಚುನಾವಣೆಯಲ್ಲೂ ಎನ್‌ಡಿಎ ಪರವಾಗಿ ಯಡಿಯೂರಪ್ಪ, ಕುಮಾರಸ್ವಾಮಿ, ವಿಜಯೇಂದ್ರ, ಬೊಮ್ಮಾಯಿ ಸೇರಿದಂತೆ ಯಾರೇ ದೊಡ್ಡ ನಾಯಕರು ಬಂದು ನಿಂತರೂ ಕಾಂಗ್ರೆಸ್ ಗೆಲುವು ತಡೆಯಲು ಸಾಧ್ಯವಿಲ್ಲ” ಎಂದರು.

ನಾನೇ ನಿಮ್ಮ ಅಭ್ಯರ್ಥಿ – ಧರ್ಮಪುರ ತಾಲ್ಲೂಕು ರಚನೆ ಪರಿಶೀಲನೆ:

ಸ್ಥಳೀಯರ ದಶಕಗಳ ಬೇಡಿಕೆಯಾದ ಧರ್ಮಪುರವನ್ನು ಪ್ರತ್ಯೇಕ ತಾಲ್ಲೂಕನ್ನಾಗಿ ಘೋಷಿಸುವ ವಿಚಾರದ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಆಲೋಚನೆ ಇದ್ದು, ಜನಸಂಖ್ಯೆ ಹಾಗೂ ಹೋಬಳಿಗಳ ಸೇರ್ಪಡೆ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಮುಂದುವರಿದು ಮಾತನಾಡಿದ ಅವರು, “ನಾನು ಕೇವಲ ಚುನಾವಣೆಗಾಗಿ ಬಂದು ಹೋಗುವವನಲ್ಲ. ಇಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂದು ಈಗಾಗಲೇ ನಾಲ್ಕು ಪ್ರತ್ಯೇಕ ಸರ್ವೇಗಳನ್ನು ಮಾಡಿಸಿದ್ದೇನೆ. ಆದರೆ, ಈ ಕ್ಷೇತ್ರದಲ್ಲಿ ಸ್ವತಃ ಈ ಡಿ.ಕೆ.ಶಿವಕುಮಾರ್ ಅವರೇ ಅಭ್ಯರ್ಥಿ ಎಂದು ಭಾವಿಸಿ ಕಾಂಗ್ರೆಸ್ ಪಕ್ಷಕ್ಕೆ ಧರ್ಮಪುರ ಹೋಬಳಿಯಿಂದ ಕನಿಷ್ಠ 15 ಸಾವಿರ ಮತಗಳ ಭಾರಿ ಲೀಡ್ ನೀಡಬೇಕು” ಎಂದು ಜನರಲ್ಲಿ ಮನವಿ ಮಾಡಿದರು.

ಬರಗಾಲದ ಭೀಕರ ಪರಿಸ್ಥಿತಿಯಿದ್ದರೂ ಕೇಂದ್ರ ಸರ್ಕಾರವು ರಾಜ್ಯಕ್ಕೆ ಒಂದೂ ರೂಪಾಯಿ ಪರಿಹಾರ ನೀಡಿಲ್ಲ. ಆದರೆ ನಮ್ಮ ಸರ್ಕಾರವು ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಐತಿಹಾಸಿಕ ಆದೇಶ ಹೊರಡಿಸಿದೆ. ಕೊಟ್ಟ ಮಾತು ಉಳಿಸಿಕೊಳ್ಳುವ ಕಾಂಗ್ರೆಸ್ ಪಕ್ಷವನ್ನು ಧರ್ಮದ ನೆಲೆಯಾದ ಧರ್ಮಪುರದ ಜನತೆ ಬೆಂಬಲಿಸಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

 


Share this with Friends

Related Post