Tue. Nov 3rd, 2026

ಹಿರಿಯೂರು ಕ್ಷೇತ್ರಕ್ಕೆ ₹2,200 ಕೋಟಿ ಅಭಿವೃದ್ಧಿ ಕೊಡುಗೆ

Share this with Friends

ಹಿರಿಯೂರು: “ನಾವು ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಬರಿಗೈನಲ್ಲಿ ಬಂದಿಲ್ಲ, ಬದಲಿಗೆ ವಿವಿಧ ಇಲಾಖೆಗಳ ಮೂಲಕ ಬರೋಬ್ಬರಿ ₹2,200 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳ ಭರ್ಜರಿ ಕೊಡುಗೆಯನ್ನು ಹೊತ್ತು ತಂದಿದ್ದೇವೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ತಾಲ್ಲೂಕಿನ ಧರ್ಮಪುರದಲ್ಲಿ ₹3.5 ಕೋಟಿ ವೆಚ್ಚದ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಮಂಗಳವಾರ (ನವೆಂಬರ್ 3) ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಈ ವೇಳೆ ಕ್ಷೇತ್ರದ ದಿವಂಗತ ಮಾಜಿ ಶಾಸಕ ಸುಧಾಕರ್ ಅವರನ್ನು ಅತ್ಯಂತ ಭಾವುಕರಾಗಿ ಸ್ಮರಿಸಿದ ಸಿಎಂ, “ನಾನು ಮುಖ್ಯಮಂತ್ರಿಯಾಗಿರುವುದನ್ನು ನೋಡಲು ನನ್ನ ಆತ್ಮೀಯ ಸ್ನೇಹಿತ ಸುಧಾಕರ್ ಇಂದು ಬದುಕಿರಬೇಕಿತ್ತು. ಆತ ಜಾತಿ-ಧರ್ಮದ ಭೇದವಿಲ್ಲದೆ ಸಾರ್ವಜನಿಕ ಸೇವೆ ಮಾಡಿದ ಮಹನೀಯ. ಸುಧಾಕರ್ ಅವರನ್ನು ಗೆಲ್ಲಿಸಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ 136 ಸೀಟುಗಳನ್ನು ತಂದುಕೊಟ್ಟ ಹಿರಿಯೂರು ಕ್ಷೇತ್ರದ ಜನತೆಯ ಋಣವನ್ನು ನಾವು ಅಭಿವೃದ್ಧಿಯ ಮೂಲಕ ತೀರಿಸುತ್ತಿದ್ದೇವೆ” ಎಂದರು.

ರೈತರ ಉಚಿತ ವಿದ್ಯುತ್‌ಗಾಗಿ ₹30,000 ಕೋಟಿ ವೆಚ್ಚ:

ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿಗಳು, “ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಸರ್ಕಾರ ವಾರ್ಷಿಕವಾಗಿ ₹22,000 ಕೋಟಿ ವಿನಿಯೋಗಿಸುತ್ತಿತ್ತು. ಆದರೆ ಈ ಬಾರಿ ಭೀಕರ ಬರಗಾಲ ಎದುರಾಗಿರುವುದರಿಂದ ರೈತರ ಹಿತ ಕಾಯಲು ಇಲಾಖೆಯ ವೆಚ್ಚವನ್ನು ₹30,000 ಕೋಟಿಗೆ ಹೆಚ್ಚಿಸಲಾಗಿದೆ. 200ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ. ಇಷ್ಟಿದ್ದರೂ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿದ್ದ ₹5,400 ಕೋಟಿ ಅನುದಾನದಲ್ಲಿ ಒಂದು ಬಿಡಿಗಾಸನ್ನೂ ನೀಡಿಲ್ಲ. ಯಾವ ನೈತಿಕತೆ ಇಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇಲ್ಲಿ ಮತ ಕೇಳಲು ಬರುತ್ತಾರೆ?” ಎಂದು ಕಟುವಾಗಿ ಪ್ರಶ್ನಿಸಿದರು.

ಬಡವರಿಗೆ ಆಸ್ತಿ ದಾಖಲೆ ಮತ್ತು ನಿವೇಶನ ಗ್ಯಾರಂಟಿ:

ರಾಜ್ಯದ ನಿವೇಶನರಹಿತ ಬಡವರಿಗಾಗಿ ಈ ವರ್ಷ ಸಚಿವರಾದ ಜಮೀರ್ ಅಹ್ಮದ್ ಹಾಗೂ ಪರಮೇಶ್ವರ್ ಅವರ ನೇತೃತ್ವದಲ್ಲಿ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಸರ್ಕಾರಿ ಜಾಗ ಸಿಗದಿದ್ದರೆ ಖಾಸಗಿ ಜಮೀನು ಖರೀದಿಸಿಯಾದರೂ ನಿವೇಶನ ಒದಗಿಸಲಾಗುವುದು. ಇದರೊಂದಿಗೆ ‘ಭೂಮಿ ಗ್ಯಾರಂಟಿ’ ಆಂದೋಲನದ ಮೂಲಕ ಪ್ರತಿಯೊಬ್ಬರ ಆಸ್ತಿ ದಾಖಲೆಗಳನ್ನು ಪೋಡಿ ಮಾಡಿ, ಫೋಟೋ ಸಹಿತ ಉಚಿತವಾಗಿ ಸರಿಪಡಿಸಿಕೊಡಲಾಗುತ್ತಿದೆ. ವಿಜಯನಗರದಲ್ಲಿ ಈಗಾಗಲೇ 1.11 ಲಕ್ಷ ಬುಡಕಟ್ಟು ಜನರಿಗೆ ಭೂ ದಾಖಲೆ ನೀಡಲಾಗಿದೆ. ಇಂತಹ ಜನಪರ ಕೆಲಸಗಳನ್ನು ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಮತ್ತು ದಳದವರು ಏಕೆ ಮಾಡಲಿಲ್ಲ ಎಂದು ಸಿಎಂ ಕಿಡಿಕಾರಿದರು.

ಕನಕಪುರದಷ್ಟೇ ಹಿರಿಯೂರು ನನಗೆ ಮುಖ್ಯ:

ಕ್ಷೇತ್ರದ ಸರ್ವಸಮುದಾಯಗಳ ಅಭಿವೃದ್ಧಿಗೆ ಬದ್ಧವಾಗಿರುವ ಸರ್ಕಾರವು ಒಕ್ಕಲಿಗರ ಸಮುದಾಯ ಭವನಕ್ಕೆ ₹5 ಕೋಟಿ ಸೇರಿದಂತೆ ಗೊಲ್ಲರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಕನಕ ಭವನಗಳಿಗೆ ವಿಶೇಷ ಅನುದಾನ ಮಂಜೂರು ಮಾಡಿದೆ. “ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ಆದರೆ ದಾನ ಧರ್ಮ ಮಾಡುವ ಹಸ್ತ ಅಧಿಕಾರದಲ್ಲಿದ್ದರೆ ಮಾತ್ರ ದೇಶಕ್ಕೆ ಚೆಂದ. ನನಗೆ ನನ್ನ ಸ್ವಕ್ಷೇತ್ರ ಕನಕಪುರ ಎಷ್ಟು ಮುಖ್ಯವೋ, ಹಿರಿಯೂರು ಕ್ಷೇತ್ರವೂ ಅಷ್ಟೇ ಮುಖ್ಯ” ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

 


Share this with Friends

Related Post