ಮ್ಯಾಂಚೆಸ್ಟರ್ (ಯುಕೆ): ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಪ್ರವಾಸಿ ತಾಣಗಳ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಯುನೈಟೆಡ್ ಕಿಂಗ್ಡಮ್ನ (UK) ಮ್ಯಾಂಚೆಸ್ಟರ್ ನಗರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಯಶಸ್ವಿ ‘ಪ್ರವಾಸೋದ್ಯಮ ರೋಡ್ಶೋ’ ಹಮ್ಮಿಕೊಂಡಿದೆ.
ಬ್ರಿಟನ್ನ ಪ್ರವಾಸಿಗರನ್ನು ಆಕರ್ಷಿಸಲು ಆಯೋಜಿಸಲಾಗಿದ್ದ ಈ ಬೃಹತ್ ಕಾರ್ಯಕ್ರಮದಲ್ಲಿ ಯುಕೆ ಪ್ರವಾಸೋದ್ಯಮ ಉದ್ಯಮದ 50ಕ್ಕೂ ಹೆಚ್ಚು ಪ್ರಮುಖ ಟ್ರಾವೆಲ್ ಏಜೆಂಟ್ಗಳು ಹಾಗೂ ಟೂರ್ ಆಪರೇಟರ್ಗಳು ಭಾಗವಹಿಸಿದ್ದರು. ಯುಕೆ ಪ್ರವಾಸಿಗರಿಗೆ ಸಿದ್ಧಪಡಿಸುವ ಅಂತರರಾಷ್ಟ್ರೀಯ ಪ್ರವಾಸ ಪ್ಯಾಕೇಜ್ಗಳಲ್ಲಿ ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ವಿಶಿಷ್ಟ ತಾಣಗಳನ್ನು ಕಡ್ಡಾಯವಾಗಿ ಸೇರಿಸುವ ಕುರಿತು ಈ ರೋಡ್ಶೋನಲ್ಲಿ ಸುದೀರ್ಘ ಸಂವಾದ ನಡೆಸಲಾಯಿತು.
ಮಲೆನಾಡು-ಕರಾವಳಿ ಪ್ರವಾಸೋದ್ಯಮಕ್ಕೆ ಜಾಗತಿಕ ಪ್ರಚಾರ:
ಈ ಬಾರಿ ಯುಕೆ ಪ್ರಚಾರ ಅಭಿಯಾನದಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯ, ಕರಾವಳಿಯ ಪ್ರಶಾಂತ ಕಡಲತೀರಗಳು ಹಾಗೂ ಮಲೆನಾಡಿನ ಅನ್ವೇಷಿತ ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಲು ವಿಶೇಷ ಒತ್ತು ನೀಡಲಾಗಿದೆ. ಮುಖ್ಯವಾಗಿ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಕಾಫಿ ಪ್ರವಾಸೋದ್ಯಮದ (Coffee Tourism) ಅಡಿಯಲ್ಲಿ ಬರುವ ಕಾಫಿ ಎಸ್ಟೇಟ್ಗಳ ವಾಸ್ತವ್ಯ, ಸ್ಥಳೀಯ ಸಾಂಪ್ರದಾಯಿಕ ಆಹಾರ ಸಂಸ್ಕೃತಿ ಮತ್ತು ‘ಸ್ಲೋ ಟ್ರಾವೆಲ್’ ಪ್ರವೃತ್ತಿಯ ವಿಶಿಷ್ಟ ಉತ್ಪನ್ನಗಳನ್ನು ಬ್ರಿಟನ್ ಮಾರುಕಟ್ಟೆಗೆ ಪ್ರಮುಖ ಆಕರ್ಷಣೆಯಾಗಿ ಪ್ರಸ್ತುತಪಡಿಸಲಾಯಿತು.
ನೈಜ ಪ್ರವಾಸಿಗರ ಆಗಮನವೇ ನಮ್ಮ ಗುರಿ:
ರೋಡ್ಶೋ ನೇತೃತ್ವ ವಹಿಸಿದ್ದ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದರ್ಶಿತ್ವ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ನಮ್ಮ ಇಲಾಖೆಯು ಜಾಗತಿಕ ಮಾರುಕಟ್ಟೆ ವಿಸ್ತರಣೆಗೆ ಹೆಜ್ಜೆ ಇಟ್ಟಿದೆ. ಮ್ಯಾಂಚೆಸ್ಟರ್ ನಮಗೆ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ನಮ್ಮ ಗುರಿ ಕೇವಲ ಪ್ರಚಾರಕ್ಕೆ ಸೀಮಿತವಾಗಿಲ್ಲ; ಬ್ರಿಟಿಷ್ ಟ್ರಾವೆಲ್ ಏಜೆಂಟ್ಗಳ ಪ್ಯಾಕೇಜ್ಗಳ ಮೂಲಕ ವಿದೇಶಿ ಪ್ರವಾಸಿಗರು ನೇರವಾಗಿ ಕರ್ನಾಟಕಕ್ಕೆ ಬರುವಂತೆ ಮಾಡುವುದಾಗಿದೆ” ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾರತದ ಕಾನ್ಸುಲ್ ಜನರಲ್ ವಿಶಾಖಾ ಯದುವಂಶಿ ಪಾಲ್ಗೊಂಡು ಕರ್ನಾಟಕದ ಈ ಜಾಗತಿಕ ಅಭಿಯಾನಕ್ಕೆ ಸಂಪೂರ್ಣ ರಾಜತಾಂತ್ರಿಕ ಬೆಂಬಲ ವ್ಯಕ್ತಪಡಿಸಿದರು. ಇಲಾಖೆಯ ಈ ನಿಯೋಗದಲ್ಲಿ ಕೆಎಸ್ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಪಿ.ಆರ್., ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಎಂಡಿ ಶಿವರಾಮ್ ಬಾಬು ಹಾಗೂ ಜಂಟಿ ನಿರ್ದೇಶಕ ಜನಾರ್ದನ್ ಎಸ್.ಪಿ. ಅವರು ಭಾಗವಹಿಸಿ ಜಾಗತಿಕ ಉದ್ಯಮಿಗಳೊಂದಿಗೆ ಚರ್ಚಿಸಿದರು. ಮುಂಬರುವ ದಿನಗಳಲ್ಲಿ ಈ ಅಭಿಯಾನವು ಲಂಡನ್ನ ‘ವರ್ಲ್ಡ್ ಟ್ರಾವೆಲ್ ಮಾರ್ಕೆಟ್ (WTM) 2026’ ಹಾಗೂ ಬರ್ಮಿಂಗ್ಹ್ಯಾಮ್ ನಗರಗಳಲ್ಲೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

