Tue. Nov 3rd, 2026

ಪ್ರಿಯಾಂಕ್ ಖರ್ಗೆ ಗೃಹ ಇಲಾಖೆ ನಡೆಸಲು ಅನ್ಫಿಟ್: ಸ್ಟಿಂಗ್ ಆಪರೇಷನ್ ತನಿಖೆ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ

Share this with Friends

ಬೆಂಗಳೂರು: “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಜವಾಬ್ದಾರಿಯುತ ಗೃಹ ಇಲಾಖೆಯನ್ನು ಮುನ್ನಡೆಸಲು ಸಚಿವ ಪ್ರಿಯಾಂಕ್ ಖರ್ಗೆ ಅವರು ತೀರಾ ಅಸಮರ್ಥರಾಗಿದ್ದಾರೆ (Unfit)” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾದ ಕಟು ವಿವಾದಾತ್ಮಕ ಸ್ಟಿಂಗ್ ಆಪರೇಷನ್ ತನಿಖೆಯ ದಿಕ್ಕು ತಪ್ಪಿಸುತ್ತಿರುವ ಸರ್ಕಾರದ ನಡೆಗಳ ವಿರುದ್ಧ ಹರಿಹಾಯ್ದರು.

ಸಂತ್ರಸ್ತೆಯ ಇ-ಮೇಲ್ ಎಲ್ಲಿ ಹೋಯಿತು?

“ಅಧಿಕಾರ, ಗುಪ್ತದಳ ಮತ್ತು ಇಡೀ ಪೊಲೀಸ್ ವ್ಯವಸ್ಥೆ ಕೈಯಲ್ಲಿದ್ದರೂ ಪ್ರಿಯಾಂಕ್ ಖರ್ಗೆ ಅವರು ನನ್ನ ಬಳಿ ಸಾಕ್ಷ್ಯ ಕೇಳುತ್ತಿರುವುದು ಅವರ ಆಡಳಿತಾತ್ಮಕ ಯೋಗ್ಯತೆಯನ್ನು ಪ್ರಶ್ನಿಸುವಂತಿದೆ. ಈ ಪ್ರಕರಣದ ಪ್ರಮುಖ ಸಂತ್ರಸ್ತೆಯಾಗಿದ್ದ ಕೃಪಾ ಆಳ್ವ ಅವರು ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಳುಹಿಸಿದ್ದ ಮಹತ್ವದ ಇ-ಮೇಲ್ ದತ್ತಾಂಶ ಈಗ ಎಲ್ಲಿದೆ? ಅದನ್ನು ಇಲಾಖೆಯಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಲಾಗಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಅಳಿಸಿ ಹಾಕಲಾಗಿದೆಯೇ (Delete) ಎಂಬುದನ್ನು ಖರ್ಗೆ ಅವರೇ ಬಹಿರಂಗಪಡಿಸಬೇಕು” ಎಂದು ಹೆಚ್‌ಡಿಕೆ ಸವಾಲು ಹಾಕಿದರು. ಆಗ ಬೇರೆ ಖಾತೆಯಲ್ಲಿದ್ದ ಪ್ರಿಯಾಂಕ್ ಅವರಿಗೆ ಈಗ ಗೃಹ ಖಾತೆಯ ಹೊಣೆ ನೀಡಲಾಗಿದೆ, ಹಾಗಿದ್ದ ಮೇಲೆ ಅದರ ತನಿಖೆ ಮಾಡಿಸಲು ಅವರಿಗೆ ಇರುವ ಹಿಂಜರಿಕೆ ಏಕ ಎಂದು ಪ್ರಶ್ನಿಸಿದರು.

ತನಿಖೆಯ ದಾರಿ ತಪ್ಪಿಸುತ್ತಿರುವ ಸಿಎಂ, ಗೃಹ ಸಚಿವರು:

ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಸ್ಟಿಂಗ್ ಕಾರ್ಯಾಚರಣೆಯ ಸೂತ್ರಧಾರರನ್ನು ಬಂಧಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ತಿಳಿಸಿದ ಕುಮಾರಸ್ವಾಮಿ, “ನಾನು ಸಿದ್ದರಾಮಯ್ಯ ಅವರ ಮೇಲಿನ ಅನುಕಂಪಕ್ಕಾಗಲಿ ಅಥವಾ ಸಮಾಜದ ಮುಖಂಡರೊಬ್ಬರು ಸಿಎಂ ಆಗಿದ್ದಾರೆಂಬ ಅಸೂಯೆಯಿಂದಾಗಲಿ ಇದನ್ನು ಹೇಳುತ್ತಿಲ್ಲ. ಆದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ನಿರಂತರ ರಾಜಕೀಯ ಒತ್ತಡದಿಂದಾಗಿ ಪೊಲೀಸರು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ತನಿಖೆಯ ದಾರಿಯನ್ನು ಸಂಪೂರ್ಣವಾಗಿ ತಪ್ಪಿಸುತ್ತಿದ್ದಾರೆ. ಕೊಲೆಗಡುಕರನ್ನು ಬಿಟ್ಟು, ಕೊಲೆ ನಡೆದಿದೆ ಎಂದು ಕಿರುಚಾಡಿದವರ ಬೆನ್ನತ್ತಿರುವ ದಾರಿದ್ರ್ಯ ಸ್ಥಿತಿ ರಾಜ್ಯ ಪೊಲೀಸ್ ವ್ಯವಸ್ಥೆಗೆ ಬಂದಿದೆ” ಎಂದು ಕಟುವಾಗಿ ಆಕ್ಷೇಪಿಸಿದರು.

ಕಾಂಗ್ರೆಸ್‌ನಲ್ಲೇ ಸಿದ್ದರಾಮಯ್ಯ ಮುಗಿಸುವ ಸಂಚು:

ಕಾಂಗ್ರೆಸ್ ಪಕ್ಷದ ಒಳಗಿನ ಕೆಲವು ಪ್ರಭಾವಿ ನಾಯಕರೇ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊಂಚು ಹಾಕುತ್ತಿದ್ದು, ಹೊಸ ರಾಜಕೀಯ ದಾಳ ಉರುಳಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ಮುಖ್ಯಮಂತ್ರಿಗಳು ಈಗಾಗಲೇ ವರಿಷ್ಠರಾದ ರಾಹುಲ್ ಗಾಂಧಿ ಅವರಿಗೆ 2028ರ ಚುನಾವಣೆಯ ಭವಿಷ್ಯದ ಬಗ್ಗೆ ಗಟ್ಟಿಯಾಗಿಯೇ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಎಲ್ಲಾ ಆಡಳಿತ ವೈಫಲ್ಯಗಳು ಹಾಗೂ ಒಳಜಗಳಗಳಿಗೆ ಮುಂಬರುವ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಪ್ರಜ್ಞಾವಂತ ಜನತೆ ತಕ್ಕ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಕೇಂದ್ರ ಸಚಿವರು ಎಚ್ಚರಿಸಿದರು.

 


Share this with Friends

Related Post