ಬೆಂಗಳೂರು: ಗ್ರಾಮ ಆಡಳಿತಾಧಿಕಾರಿ (VA) ನೇಮಕಾತಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿರುವ 5,000 ಅಭ್ಯರ್ಥಿಗಳ ಹಿಂದಿನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಅಂಕಗಳ ವಿವರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಮುಕ್ತವಾಗಿ ಪ್ರಕಟಿಸಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವ ಭಾಗವಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಈ ಹಿಂದೆ ನಡೆದಿದ್ದ ಸಿವಿಲ್ ಪೊಲೀಸ್, ಕೆಎಸ್ಆರ್ಪಿ, ಸಿಎಆರ್/ಡಿಎಆರ್ ಕಾನ್ಸ್ಟೇಬಲ್ ಹಾಗೂ ಭೂಮಾಪಕ (Surveyor) ಹುದ್ದೆಗಳ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪಡೆದಿದ್ದ ಅಂಕಗಳಿಗೂ, ಪ್ರಸ್ತುತ ವಿಲೇಜ್ ಅಡ್ಮಿನ್ ಪರೀಕ್ಷೆಯ ಅಂಕಗಳಿಗೂ ಭಾರಿ ವ್ಯತ್ಯಾಸವಿರುವ ಶಂಕಾಸ್ಪದ ಪ್ರಕರಣಗಳನ್ನು ಗುರುತಿಸಲಾಗಿದೆ. ಇಂತಹ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಮರುಪರಿಶೀಲಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕೋರಲಾಗಿದೆ.
ಮೊಬೈಲ್ ನೋಡಿ ಪರೀಕ್ಷೆ ಬರೆದಿದ್ದ ‘ಟಾಪರ್’:
ಕೆಎಸ್ಆರ್ಪಿ ಪರೀಕ್ಷೆಯಲ್ಲಿ ತೀರಾ ಕಡಿಮೆ ಅಂಕ ಪಡೆದಿದ್ದ ಹಾವೇರಿ ಜಿಲ್ಲೆಯ ಅಭ್ಯರ್ಥಿಯೊಬ್ಬ, ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಆಘಾತಕಾರಿ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಕೆಇಎ ನಡೆಸಿದ ಆಂತರಿಕ ತನಿಖೆ ಹಾಗೂ ಹಾವೇರಿ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಅಧಿಕೃತ ವರದಿಯಲ್ಲಿ, ಆ ಅಭ್ಯರ್ಥಿಯು ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಬಳಸಿ ನಕಲು ಮಾಡಿರುವುದು ಸಿಸಿಟಿವಿ ದೃಶ್ಯಾವಳಿಗಳ ಸಮೇತ ಸಾಬೀತಾಗಿದೆ. ಸದ್ಯ ಹಾವೇರಿ ಪೊಲೀಸರು ಈ ಹಗರಣದ ತನಿಖೆ ಕೈಗೆತ್ತಿಕೊಂಡಿದ್ದು, ಅಕ್ರಮವೆಸಗಿದ ಕಿಲಾಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಸನ್ನ ಎಚ್ಚರಿಸಿದ್ದಾರೆ.
ಶಿಗ್ಗಾವಿ ಲೋಪದ ಬೆನ್ನಲ್ಲೇ ಪರೀಕ್ಷಾ ವ್ಯವಸ್ಥೆಗೆ ಮೇಜರ್ ಸರ್ಜರಿ:
ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಉಂಟಾದ ಭದ್ರತಾ ಲೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಧಿಕಾರವು, ಮುಂಬರುವ ಪರೀಕ್ಷೆಗಳಿಗಾಗಿ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಬಿಗಿ ಸುಧಾರಣಾ ಮಾರ್ಗಸೂಚಿಗಳನ್ನು ರವಾನಿಸಿದೆ:
ಕೊಠಡಿಗೆ ಇಬ್ಬರು ಮೇಲ್ವಿಚಾರಕರು: ಇನ್ನು ಮುಂದೆ ಪ್ರತಿ ಪರೀಕ್ಷಾ ಕೊಠಡಿಯ ಮುಂಭಾಗ ಹಾಗೂ ಹಿಂಭಾಗದಲ್ಲಿ ಇಬ್ಬರು ಮೇಲ್ವಿಚಾರಕರು ಕಡ್ಡಾಯವಾಗಿ ನಿಂತು ನಿಗಾ ಇಡಲಿದ್ದಾರೆ. ಜಾಮರ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರಿಶೀಲಿಸುವ ಹೊಣೆ ಇವರದ್ದೇ ಆಗಿರುತ್ತದೆ.
ಕೊಠಡಿಯೊಳಗೂ ದ್ವಿತೀಯ ಹಂತದ ತಪಾಸಣೆ: ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರ ಮಾತ್ರವಲ್ಲದೆ, ಕೊಠಡಿಯ ಒಳಗೂ ಎರಡನೇ ಬಾರಿ ತಪಾಸಣೆ ನಡೆಸಲಾಗುವುದು. ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೆ ಕಡ್ಡಾಯವಾಗಿ ಅರ್ಧ ಗಂಟೆ ಮುಂಚಿತವಾಗಿ ಆಸನದಲ್ಲಿರಬೇಕು. ಕೊನೆ ಕ್ಷಣದಲ್ಲಿ ಬರುವವರಿಗೆ ಯಾವುದೇ ಕಾರಣಕ್ಕೂ ಪ್ರವೇಶವಿಲ್ಲ.
ಸಿಸಿಟಿವಿ ನಿಗಾ ಉಸ್ತುವಾರಿ: ಪರೀಕ್ಷಾ ಕೇಂದ್ರಗಳ ವೆಬ್ ಕಾಸ್ಟಿಂಗ್ ಜೊತೆಗೆ, ಪ್ರತಿ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳ ಮೇಲೆ ನಿರಂತರ ನಿಗಾ ಇಡಲು ಒಬ್ಬರು ಪ್ರತ್ಯೇಕ ಮೇಲ್ವಿಚಾರಕರನ್ನು ನೇಮಿಸಲಾಗುತ್ತದೆ.
ಒಂದೇ ಹೆಸರಿನ ಗೊಂದಲ: ಸುಳ್ಳು ಸುದ್ದಿ ಹಬ್ಬಿಸದಂತೆ ಕೆಇಎ ಎಚ್ಚರಿಕೆ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದೇ ಹೆಸರಿನ ನೂರಾರು ಅಭ್ಯರ್ಥಿಗಳು ಇರುತ್ತಾರೆ. ಇತ್ತೀಚೆಗೆ ‘ಶಿವರಾಜ್ ಪಾಟೀಲ’ ಎಂಬ ಇಬ್ಬರು ಪ್ರತ್ಯೇಕ ಅಭ್ಯರ್ಥಿಗಳ ಅಂಕಗಳನ್ನು ಅದಲು-ಬದಲು ಮಾಡಿ ಇಬ್ಬರೂ ಒಂದೇ ಎನ್ನುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಾಗೂ ಅನಗತ್ಯ ಟೀಕೆಗಳನ್ನು ಬಿತ್ತರಿಸಲಾಗುತ್ತಿದೆ. ಇಂತಹ ಬೇಜವಾಬ್ದಾರಿ ನಡೆಗಳನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ. ಅಭ್ಯರ್ಥಿಗಳಿಗೆ ಯಾವುದೇ ರೀತಿಯ ನೈಜ ಅನುಮಾನಗಳಿದ್ದಲ್ಲಿ ಆಧಾರ ಸಹಿತವಾಗಿ ಇ-ಮೇಲ್ ಮೂಲಕ ಕೆಇಎ ಗಮನಕ್ಕೆ ತರಬೇಕು. ಅದನ್ನು ಬಿಟ್ಟು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಪ್ರಸನ್ನ ಮನವಿ ಮಾಡಿದ್ದಾರೆ.

