ಬೆಂಗಳೂರು: “ರಾಜ್ಯ ಸರ್ಕಾರವು ನೂತನ ಸಿಎಸ್ಆರ್ (CSR) ನೀತಿಯನ್ನು ಜಾರಿಗೊಳಿಸಿದ್ದು, ನಾಡಿನ ಎಲ್ಲಾ ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಅಥವಾ ಅವುಗಳ ಮೂಲಸೌಕರ್ಯ ಅಭಿವೃದ್ಧಿಗೆ ಕೈಜೋಡಿಸಬೇಕು,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಬುಧವಾರ ನಡೆದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕಾ (CSR) ಪ್ರತಿನಿಧಿಗಳು ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಭೆಯಲ್ಲಿ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮೊದಲ ಹಂತದಲ್ಲಿ 1,000 ಶಾಲೆಗಳ ಜೋಡಣೆ:
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸಿ, ಅಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮುಂದಿನ 4-5 ವರ್ಷಗಳಲ್ಲಿ ಒಟ್ಟು 2,000 ಸರ್ಕಾರಿ ಶಾಲೆಗಳನ್ನು ಈ ರೀತಿ ಜೋಡಿಸುವ ಚಿಂತನೆ ಇದ್ದು, ಆರಂಭಿಕವಾಗಿ 1,000 ಶಾಲೆಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಯಾವ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಖಾಸಗಿ ಆಡಳಿತ ಮಂಡಳಿಗಳ ವಿವೇಚನೆಗೇ ಬಿಡಲಾಗಿದೆ. ಆರ್ಥಿಕ ನೆರವು ನೀಡಲು ಸಾಧ್ಯವಾಗದಿದ್ದರೆ, ಖಾಸಗಿ ಶಾಲೆಗಳು ತಮ್ಮ ನೈಪುಣ್ಯ ಹೊಂದಿರುವ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ಜ್ಞಾನ ವಿನಿಮಯಕ್ಕಾಗಿ ಕಳುಹಿಸಬಹುದು ಅಥವಾ ಬಳಸದ ಬಸ್ಗಳು, ಕಂಪ್ಯೂಟರ್ ಹಾಗೂ ಲ್ಯಾಬ್ ಉಪಕರಣಗಳನ್ನು ನೀಡಿ ಸಹಕರಿಸಬಹುದು ಎಂದು ಸಿಎಂ ತಿಳಿಸಿದರು.
ಬ್ರಾಂಡಿಂಗ್ಗೆ ಮುಕ್ತ ಅವಕಾಶ:
ಖಾಸಗಿ ಸಂಸ್ಥೆಗಳು ಅಥವಾ ಶಾಲೆಗಳು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದರೆ, ಆ ಸರ್ಕಾರಿ ಶಾಲೆಯ ಹೆಸರಿನೊಂದಿಗೆ ತಮ್ಮ ಸಂಸ್ಥೆಯ ಹೆಸರನ್ನು ಸೇರಿಸಿಕೊಳ್ಳಲು ಸರ್ಕಾರ ಮುಕ್ತ ಅವಕಾಶ ನೀಡಿದೆ. ಉದಾಹರಣೆಗೆ, ತಮಿಳುನಾಡು ಗಡಿಯಲ್ಲಿರುವ ಹೆಗ್ಗನೂರು ಸರ್ಕಾರಿ ಶಾಲೆಗೆ ‘ಹೆಗ್ಗನೂರು ಸರ್ಕಾರಿ ಟೊಯೊಟೊ ಶಾಲೆ’ ಎಂದು ಹೆಸರಿಡಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಕಾರಣಕ್ಕೂ ಸಿಎಸ್ಆರ್ ಹಣವನ್ನು ಸರ್ಕಾರ ನೇರವಾಗಿ ಪಡೆಯುವುದಿಲ್ಲ, ಬದಲಿಗೆ ಸಂಪೂರ್ಣ ಪಾರದರ್ಶಕವಾಗಿ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಶಿಕ್ಷಣಕ್ಕೆ ಮೊದಲ ಆದ್ಯತೆ:
ರಾಜ್ಯದಲ್ಲಿ ವಾರ್ಷಿಕವಾಗಿ ಸುಮಾರು 8,800 ಕೋಟಿ ರೂ. ಸಿಎಸ್ಆರ್ ನಿಧಿ ಲಭ್ಯವಿದ್ದು, ಇದರ ಸಿಂಹಪಾಲು ಗ್ರಾಮೀಣ ಪ್ರಾಥಮಿಕ ಶಾಲೆಗಳ ಸುಧಾರಣೆಗೆ ಬಳಕೆಯಾಗಬೇಕು ಎಂದು ಕಂಪನಿಗಳಿಗೆ ಮನವಿ ಮಾಡಲಾಗಿದೆ. ಇದೇ ವೇಳೆ, ರಾಜ್ಯದಲ್ಲಿ ಗಳಿಸಿದ ಸಿಎಸ್ಆರ್ ಹಣವನ್ನು ಮುಂಬೈ ಮತ್ತಿತರ ಕಡೆ ಕಚೇರಿ ತೆರೆದು ಬೇರೆಡೆಗೆ ವರ್ಗಾಯಿಸುವ ದಂಧೆಗೆ ಕಡಿವಾಣ ಹಾಕುವಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿರುವುದಾಗಿ ಸಿಎಂ ತಿಳಿಸಿದರು.
ಬೆಂಗಳೂರಿನ ಮೇಲಿನ ಒತ್ತಡ ನಿವಾರಣೆ:
“ಬೆಂಗಳೂರಿನಲ್ಲಿ ಸದ್ಯ 1.40 ಕೋಟಿ ಜನಸಂಖ್ಯೆ ಹಾಗೂ 1.20 ಕೋಟಿ ವಾಹನಗಳಿದ್ದು, ಭೀಕರ ಸಂಚಾರ ದಟ್ಟಣೆಗೆ ಉದ್ಯೋಗ ಮತ್ತು ಶಿಕ್ಷಣವೇ ಪ್ರಮುಖ ಕಾರಣಗಳಾಗಿವೆ. ಗ್ರಾಮೀಣ ಭಾಗದ ಶಾಲೆಗಳಲ್ಲೇ ಗುಣಮಟ್ಟದ ಶಿಕ್ಷಣ ದೊರೆತರೆ, ಪೋಷಕರು ಮತ್ತು ಮಕ್ಕಳು ನಗರಕ್ಕೆ ವಲಸೆ ಬರುವುದು ತಪ್ಪುತ್ತದೆ. ಇದರಿಂದ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ,” ಎಂದು ಅಭಿಪ್ರಾಯಪಟ್ಟ ಸಿಎಂ, ಕೃಷಿಕ, ಕಾರ್ಮಿಕ ಹಾಗೂ ಸೈನಿಕರಂತೆ ‘ಶಿಕ್ಷಕರು’ ಕೂಡ ಸಮಾಜದ ಪ್ರಮುಖ ಸ್ತಂಭವಾಗಿದ್ದು, ಈ ದೇಶ ಸೇವೆಗೆ ಎಲ್ಲರೂ ಕೈಜೋಡಿಸಬೇಕು ಎಂದು ವಿನಂತಿಸಿದರು.

