Wed. Nov 4th, 2026

ಕೇಂದ್ರದಿಂದ ಡೀಸೆಲ್ ದರ ಕಡಿಮೆ ಮಾಡಿಸಿ, ನಾವು ಬಸ್ ದರ ಇಳಿಸುತ್ತೇವೆ: ವಿಪಕ್ಷಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಸವಾಲು

Share this with Friends

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಇಂಧನ ದರ ಏರಿಕೆಯಿಂದ ತೀವ್ರ ನಷ್ಟದಲ್ಲಿದ್ದ ಸಾರಿಗೆ ನಿಗಮಗಳನ್ನು ಬದುಕಿಸಲು ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ಆಕ್ಷೇಪ ಮತ್ತು ಪ್ರತಿಭಟನೆಯ ಕರೆಗೆ ಅವರು ಖಡಕ್ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಾರಿಗೆ ನಿಗಮಗಳಲ್ಲಿ ಬಸ್‌ಗಳಿಗೆ ಡೀಸೆಲ್ ಹಾಕಲು ಸಹ ಹಣವಿರಲಿಲ್ಲ, ಸಂಸ್ಥೆಗಳು ಅಷ್ಟರಮಟ್ಟಿಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದವು. ಪ್ರತಿ ಹಂತದಲ್ಲೂ (Stage) ಕೇವಲ ಎರಡರಿಂದ ಮೂರು ರೂಪಾಯಿಗಳಷ್ಟನ್ನು ಮಾತ್ರ ಹೆಚ್ಚಳ ಮಾಡಲಾಗಿರಬಹುದು. ಈಗ ದರ ಏರಿಕೆ ವಿರುದ್ಧ ಮಾತನಾಡುವವರು ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಹಾಗೂ ಡೀಸೆಲ್ ಬೆಲೆ ಹೆಚ್ಚಿಸಿದಾಗ ಯಾಕೆ ಧ್ವನಿ ಎತ್ತಲಿಲ್ಲ?” ಎಂದು ಪ್ರಶ್ನಿಸಿದರು.

“ವಿರೋಧ ಪಕ್ಷದ ನಾಯಕರು ಮೊದಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಡೀಸೆಲ್ ದರವನ್ನು ಕಡಿಮೆ ಮಾಡಿಸಲಿ, ಆ ಬಳಿಕ ನಾವು ಕೂಡ ರಾಜ್ಯದಲ್ಲಿ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡುತ್ತೇವೆ” ಎಂದು ಸವಾಲು ಹಾಕಿದರು.

ಡೀಸೆಲ್ ಬೆಲೆ ಏರಿಕೆ ಮತ್ತು ಸಿಬ್ಬಂದಿಗಳ ವೇತನ ನಿರ್ವಹಣೆಯ ಹೊರೆಯಿಂದಾಗಿ ಸಾರಿಗೆ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಈ ಬೆಲೆ ಪರಿಷ್ಕರಣೆ ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

 

 


Share this with Friends

Related Post