Wed. Nov 4th, 2026

ಬಸ್ ದರ ಏರಿಕೆ; ನವೆಂಬರ್ 5 ರಂದು ರಾಜ್ಯಾದ್ಯಂತ ಬಿಜೆಪಿ ಬೃಹತ್ ಪ್ರತಿಭಟನೆ

Share this with Friends

ಬೆಂಗಳೂರು: “ರಾಜ್ಯ ಸರ್ಕಾರವು ಸಾರಿಗೆ ನಿಗಮಗಳಿಗೆ ನೀಡಬೇಕಾದ ಬಾಕಿ ಮೊತ್ತವನ್ನೇ ಉಳಿಸಿಕೊಂಡು, ಸಂಸ್ಥೆಗಳನ್ನು ಆರ್ಥಿಕವಾಗಿ ಹಳ್ಳ ಹಿಡಿಸಿದೆ. ಸರ್ಕಾರವೇ ₹5,650.95 ಕೋಟಿ ಬಾಕಿ ಹಣವನ್ನು ನಿಗಮಗಳಿಗೆ ಪಾವತಿಸಿದ್ದರೆ ಬಸ್‌ ಟಿಕೆಟ್‌ ದರ ಏರಿಕೆ ಮಾಡುವ ಅಗತ್ಯವೇ ಇರಲಿಲ್ಲ. ಆರ್ಥಿಕ ಇಲಾಖೆಯು ಹಣ ಬಿಡುಗಡೆ ಮಾಡಲು ನಿರಾಕರಿಸಿದ್ದರಿಂದಲೇ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಜನರ ಮೇಲೆ ಕರಾರು ರಹಿತವಾಗಿ ದಾಖಲೆಯ ದರ ಏರಿಕೆಯ ಹೊರೆ ಹಾಕಿದೆ,” ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ತುಘಲಕ್ ಸರ್ಕಾರ ರಾಜ್ಯದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಮನಸೋ ಇಚ್ಛೆ ಬಸ್ ಪ್ರಯಾಣ ದರವನ್ನು ಸರಿಸುಮಾರು ಶೇ. 40 ರಷ್ಟು ಹೆಚ್ಚಿಸಿದೆ. ದೀಪಾವಳಿಯಂತಹ ಬೆಳಕಿನ ಹಬ್ಬದ ಸಂದರ್ಭದಲ್ಲೇ ಸಾಮಾನ್ಯ ಜನರ ಬದುಕಿನಲ್ಲಿ ಕತ್ತಲೆ ತರುವ ಹಾಗೂ ಜನರನ್ನು ಸುಲಿಗೆ ಮಾಡುವ ಕೆಲಸಕ್ಕೆ ಸರ್ಕಾರ ಕೈಹಾಕಿದೆ ಎಂದು ಕಿಡಿಕಾರಿದರು.

ವಿವಿಧ ಮಾರ್ಗಗಳ ‘ಕರಾಳ’ ದರ ಏರಿಕೆಯ ಪಟ್ಟಿ:

ಸರ್ಕಾರ ಜಾರಿಗೆ ತಂದಿರುವ ಕರಾಳ ದರಗಳನ್ನು ಪಟ್ಟಿ ಮಾಡಿದ ಅಶೋಕ, ಮೆಜೆಸ್ಟಿಕ್‌ನಿಂದ ಶಿವಾಜಿನಗರಕ್ಕೆ ಬಿಎಂಟಿಸಿ ದರ 12 ರೂ. ನಿಂದ 18 ರೂ. ಗೆ, ಯಶವಂತಪುರಕ್ಕೆ 18 ರೂ. ನಿಂದ 25 ರೂ. ಗೆ ಏರಿದೆ. ಬನಶಂಕರಿ ಹಾಗೂ ಅತ್ತಿಬೆಲೆಗೆ 12 ರೂ. ಹೆಚ್ಚಳವಾಗಿದ್ದರೆ, ನೆಲಮಂಗಲ ಮತ್ತು ಕಾಡುಗೋಡಿಗೆ 10 ರೂ. ಜಾಸ್ತಿಯಾಗಿದೆ. ಇನ್ನು ವೇಗದೂತ ಬಸ್‌ಗಳಲ್ಲಿ ಬೆಂಗಳೂರು-ಕೋಲಾರಕ್ಕೆ 19 ರೂ., ಬೆಂಗಳೂರು-ತುಮಕೂರಿಗೆ 81 ರೂ. ಇದ್ದ ದರವನ್ನು 100 ರೂ. ಗೆ ಹೆಚ್ಚಿಸಲಾಗಿದೆ. ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಭಕ್ತರಿಗೂ ಬಿಡದ ಸರ್ಕಾರ, ಮಂಡ್ಯಕ್ಕೆ 136 ರೂ., ಮೈಸೂರಿಗೆ 197 ರೂ., ಹಾಸನಾಂಬೆ ದರ್ಶನಕ್ಕೆ ಹಾಸನಕ್ಕೆ 270 ರೂ. (51 ರೂ. ಏರಿಕೆ) ಹಾಗೂ ಚಿಕ್ಕಮಗಳೂರಿಗೆ 363 ರೂ. (68 ರೂ. ಏರಿಕೆ) ಮಾಡಿ ಕತ್ತರಿ ಹಾಕಿದೆ ಎಂದು ವಿವರಿಸಿದರು.

ನಿಗಮಗಳಿಗೆ ಬರಬೇಕಾದ ಸರ್ಕಾರದ ಬಾಕಿ ವಿವರ:

ಅಶೋಕ ಅವರ ಪ್ರಕಾರ, ರಾಜ್ಯ ಸರ್ಕಾರದಿಂದ ನಾಲ್ಕೂ ನಿಗಮಗಳಿಗೆ ಬರಬೇಕಾದ ಬಾಕಿ ಮೊತ್ತ ಹೀಗಿದೆ:

KSRTC: ₹2,943 ಕೋಟಿ

NWKRTC: ₹1,306 ಕೋಟಿ

BMTC: ₹1,019 ಕೋಟಿ

KKRTC: ₹999 ಕೋಟಿ
ಒಟ್ಟು ಬಾಕಿ: ₹5,650.95 ಕೋಟಿ

“ನಾನು ಸಾರಿಗೆ ಸಚಿವನಾಗಿದ್ದ ಐದು ವರ್ಷಗಳ ಕಾಲ ನಿಗಮಗಳು ಸಂಪೂರ್ಣ ಲಾಭದಲ್ಲಿದ್ದವು. ಸ್ವಂತ ಹಣದಿಂದಲೇ 1,110 ಎಕರೆ ಜಮೀನು ಖರೀದಿಸಿ ಲ್ಯಾಂಡ್‌ ಬ್ಯಾಂಕ್‌ ಮಾಡಲಾಗಿತ್ತು, ಅದಕ್ಕೀಗ ₹10,000 ಕೋಟಿ ಮೌಲ್ಯವಿದೆ. ಟಿಟಿಎಂಸಿಗಳ ಬಾಡಿಗೆಯಿಂದಲೇ ₹40-50 ಕೋಟಿ ಆದಾಯ ಬರುತ್ತಿತ್ತು. ಆದರೆ ಇಂದು ಸಂಸ್ಥೆಗಳ ಒಟ್ಟು ಹೊಣೆಗಾರಿಕೆ ಹೆಚ್ಚಾಗಿದ್ದು, ನೌಕರರ ಭವಿಷ್ಯ ನಿಧಿ (PF) ₹2,901.53 ಕೋಟಿ ಹಾಗೂ ಇಂಧನ ಬಾಕಿ ₹827.37 ಕೋಟಿ ತಲುಪಿದೆ. ಬಸ್‌ಗಳಿಗೆ ಬಿಡಿಭಾಗ ಖರೀದಿಸಲೂ ಹಣವಿಲ್ಲದೆ, ಸ್ಟಿಯರಿಂಗ್‌ ಕಳಚುವ ಸ್ಥಿತಿಗೆ ಹಾಗೂ ಹೆಡ್‌ಲೈಟ್‌ ಇಲ್ಲದೆ ಮೊಬೈಲ್‌ ಟಾರ್ಚ್‌ನಲ್ಲಿ ಬಸ್ ಓಡಿಸುವ ದಯನೀಯ ಸ್ಥಿತಿಗೆ ಕಾಂಗ್ರೆಸ್ ಸಂಸ್ಥೆಯನ್ನು ತಂದಿಟ್ಟಿದೆ,” ಎಂದು ದೂರಿದರು.

ಹಾಲಿನ ದರ ಏರಿಕೆಯ ಪೆಟ್ಟು – ‘ದರಿದ್ರ ಲಕ್ಷ್ಮಿ’ ಕಟು ಟೀಕೆ:

ಸಿಎಂ ಡಿ.ಕೆ. ಶಿವಕುಮಾರ್ ಅವರು ತಾವಿರುವ ಕಡೆ ‘ಲಕ್ಷ್ಮಿ’ ಬರುತ್ತಾರೆ ಎನ್ನುವ ಮಾತನ್ನು ಲೇವಡಿ ಮಾಡಿದ ಅಶೋಕ, “ಅವರು ತರುತ್ತಿರುವುದು ಲಕ್ಷ್ಮಿ ಅಲ್ಲ, ಸಾಲದ ರೂಪದ ‘ದರಿದ್ರ ಲಕ್ಷ್ಮಿ’. ಕೇವಲ ಬುರುಡೆ ಬಿಡುವ ಕೆಲಸ ನಿರಂತರವಾಗಿದೆ. ರೈತರಿಗೆ ಹಾಲಿನ ಪ್ರೋತ್ಸಾಹಧನ 7 ರೂ. ನೀಡುತ್ತೇವೆ ಎಂದು ಮಾತು ತಪ್ಪಿದ ಸರ್ಕಾರ, ಶುಭಂ ಸ್ಟಾಂಡರ್ಡ್ ಹಾಲಿನ ದರವನ್ನು ₹12 ರಿಂದ ₹13 ರವರೆಗೆ ಏರಿಸಿದೆ. ಮೊಸರು ಕೆಜಿಗೆ 25 ರೂ. ಹಾಗೂ ಲಸ್ಸಿಗೆ 2 ರೂ. ಹೆಚ್ಚಿಸಿದೆ. ಇದರಿಂದ ಪ್ರತಿ ತಿಂಗಳು ಒಂದು ಸಾಮಾನ್ಯ ಕುಟುಂಬ ಕನಿಷ್ಠ 390 ರೂ. ಗಳಷ್ಟು ಹೆಚ್ಚುವರಿ ಖರ್ಚು ಮಾಡಬೇಕಾದ ದುಃಸ್ಥಿತಿ ಎದುರಾಗಿದೆ,” ಎಂದರು.

ನವೆಂಬರ್ 5 ರಂದು ರಾಜ್ಯಾದ್ಯಂತ ಬಿಜೆಪಿ ಹೋರಾಟ:

ಸರ್ಕಾರದ ಈ ಜನವಿರೋಧಿ ನೀತಿಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಬಸ್ ದರ ಹೆಚ್ಚಳವನ್ನು ಖಂಡಿಸಿ ನವೆಂಬರ್ 5 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ತೀವ್ರ ಸ್ವರೂಪದ ಬೃಹತ್ ಹೋರಾಟ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು. ಕೇವಲ ರಾಜಕೀಯ ಪ್ರೇರಿತ ಎನ್ನದೆ ಸಾಮಾನ್ಯ ಸಾರ್ವಜನಿಕರು ತಮ್ಮ ಹಿತದೃಷ್ಟಿಯಿಂದ ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆರ್‌.ಅಶೋಕ ಕರೆ ನೀಡಿದ್ದಾರೆ. ಅಲ್ಲದೆ, ರಾಜ್ಯದ ಆರ್ಥಿಕ ಸ್ಥಿತಿಯ ಕುರಿತು ಶ್ವೇತಪತ್ರ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

 


Share this with Friends

Related Post