Wed. Nov 4th, 2026

ಅರಮನೆ, ಅಂಬಾರಿ, ಸಿಂಹಾಸನ ನಮ್ಮ ಖಾಸಗಿ ಸ್ವತ್ತು: ಮೈಸೂರಿನಲ್ಲಿ ದಾಖಲೆ ಸಮೇತ ಸ್ಪಷ್ಟನೆ ನೀಡಿದ ಪ್ರಮೋದಾದೇವಿ ಒಡೆಯರ್ 

Share this with Friends

ಮೈಸೂರು: ಮೈಸೂರು ಅರಮನೆ ಮಾಲೀಕತ್ವ ಹಾಗೂ ಚಿನ್ನದ ಅಂಬಾರಿಗೆ ಸರ್ಕಾರ ನೀಡುತ್ತಿರುವ ಹಣದ ಕುರಿತು ಸಾರ್ವಜನಿಕ ವಲಯದಲ್ಲಿ ಎದ್ದಿರುವ ವಿವಾದಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ದಾಖಲೆ ಸಮೇತ ಸ್ಪಷ್ಟನೆ ನೀಡಿದ್ದಾರೆ. “ಮೈಸೂರು ಅರಮನೆ ಸಂಪೂರ್ಣವಾಗಿ ಸರ್ಕಾರದ ವಶದಲ್ಲಿದೆ ಎಂಬುದು ತಪ್ಪು ಕಲ್ಪನೆ. ಅರಮನೆ, ರತ್ನಖಚಿತ ಸಿಂಹಾಸನ ಹಾಗೂ ಚಿನ್ನದ ಅಂಬಾರಿ ನಮ್ಮ ಖಾಸಗಿ ಸ್ವತ್ತು. ಅವು ಅರಮನೆ ಸ್ವಾಧೀನ ಕಾಯ್ದೆಗೆ ಒಳಪಟ್ಟಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬುಧವಾರ ಮೈಸೂರು ಅರಮನೆಯ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪ್ರಮುಖ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜಮನೆತನದ ಆಸ್ತಿ ಹಕ್ಕುಗಳ ಕುರಿತು ವ್ಯಕ್ತವಾಗುತ್ತಿರುವ ಗೊಂದಲಕಾರಿ ಹೇಳಿಕೆಗಳಿಗೆ ತೆರೆ ಎಳೆದರು.

ಅಂಬಾರಿ ನಮ್ಮದೇ ಸ್ವತ್ತು: ಚಿನ್ನದ ಅಂಬಾರಿ ಹಿಂದೆಯೂ ನಮ್ಮದಾಗಿತ್ತು, ಮುಂದೆಯೂ ನಮ್ಮದೇ ಆಗಿರುತ್ತದೆ. ದಸರಾ ಜಂಬೂಸವಾರಿಗೆ ಸರ್ಕಾರ ನೀಡುತ್ತಿರುವುದು ಬಾಡಿಗೆಯಲ್ಲ, ಬದಲಿಗೆ ಗೌರವಧನ. ಸರ್ಕಾರ ಇದನ್ನು ವಾಣಿಜ್ಯ ಉದ್ದೇಶಗಳಿಗಾಗಿ (ಟಿಕೆಟ್ ಮಾರಾಟ, ಪ್ರಚಾರ) ಬಳಸಿಕೊಳ್ಳುವುದರಿಂದ ಈ ಗೌರವಧನ ಪಡೆಯಲಾಗುತ್ತಿದೆ. ಬೇಕಿದ್ದರೆ ಸರ್ಕಾರವೇ ಹೊಸ ಅಂಬಾರಿ ಸಿದ್ಧಪಡಿಸಿಕೊಂಡು ಜಂಬೂಸವಾರಿ ನಡೆಸಲಿ ಎಂದು ಅವರು ಸವಾಲು ಹಾಕಿದ್ದಾರೆ.

ಅರಮನೆ ನಮ್ಮ ಸ್ವಂತ ಹಣದ್ದೇ ಹೊರತು ದೇಣಿಗೆಯದಲ್ಲ: ಮೈಸೂರು ಮತ್ತು ಬೆಂಗಳೂರು ಅರಮನೆಗಳು ರಾಜಮನೆತನದ ಖಾಸಗಿ ಸ್ವತ್ತುಗಳಾಗಿವೆ. ಇವುಗಳನ್ನು ಸಾರ್ವಜನಿಕರ ಯಾವುದೇ ದೇಣಿಗೆಯಿಂದ ನಿರ್ಮಿಸಿಲ್ಲ, ರಾಜಮನೆತನದ ಸ್ವಂತ ಹಣದಿಂದಲೇ ಕಟ್ಟಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಸಂಯಮ ದೌರ್ಬಲ್ಯವಲ್ಲ: ಶರನ್ನವರಾತ್ರಿಯ ಸಂದರ್ಭದಲ್ಲಿ ರಾಜಮನೆತನದ ಖಾಸಗಿ ಧಾರ್ಮಿಕ ಆಚರಣೆಗಳಿಗೆ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯಿಂದ ತೊಂದರೆಯಾಗಿದೆ. ನಮ್ಮ ಸಂಯಮವನ್ನು ದೌರ್ಬಲ್ಯ ಎಂದು ಭಾವಿಸಬೇಡಿ, ಸಂಪ್ರದಾಯಗಳಿಗೆ ಧಕ್ಕೆಯಾದರೆ ಸುಮ್ಮನಿರಲು ಸಾಧ್ಯವಿಲ್ಲ. ದಸರಾ ಆಚರಣೆಯ ವೇಳೆ ಸಮನ್ವಯದ ಕೊರತೆಯಿಂದಾಗಿ ಜಟ್ಟಿ ಕಾಳಗದಂತಹ ಸಾಂಪ್ರದಾಯಿಕ ಆಚರಣೆಗಳಿಗೂ ಅಡ್ಡಿಯಾಗಿದೆ.

ಸಿಎಂ ನಿಲುವಿಗೆ ಧನ್ಯವಾದ: ವಿವಾದದ ಬೆನ್ನಲ್ಲೇ ಮಾತುಕತೆಯ ಮೂಲಕ ಗೊಂದಲ ಬಗೆಹರಿಸುವುದಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ ಪ್ರಮೋದಾದೇವಿ, ಶೀಘ್ರದಲ್ಲೇ ಅವರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.

 


Share this with Friends

Related Post