ಬೆಂಗಳೂರು: ರಾಜ್ಯದ ರಕ್ಷಣಾ ಮತ್ತು ಬಾಹ್ಯಾಕಾಶ ಉತ್ಪಾದನಾ ಕ್ಷೇತ್ರಕ್ಕೆ ಭಾರಿ ಮನ್ನಣೆ ಸಿಕ್ಕಿದ್ದು, ಯುನೈಟೆಡ್ ಕಿಂಗಡಮ್ ಮೂಲದ ಮಾರ್ಟಿನ್-ಬೇಕರ್ (Martin-Baker) ಮತ್ತು ಭಾರತದ ಟಾನ್ಬೋ ಇಮೇಜಿಂಗ್ (Tonbo Imaging) ಕಂಪನಿಗಳು ಕರ್ನಾಟಕದಲ್ಲಿ ದೊಡ್ಡ ಮಟ್ಟದ ಬಂಡವಾಳ ಹೂಡಿಕೆಗೆ ಮುಂದಾಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಮಾರ್ಟಿನ್ ಬೇಕರ್ನಿಂದ ₹380 ಕೋಟಿ ಹೂಡಿಕೆ; 500 ಉದ್ಯೋಗ ಸೃಷ್ಟಿ:
ಸೇನಾ ವಿಮಾನಗಳ ಪೈಲಟ್ಗಳ ಜೀವರಕ್ಷಣೆಗೆ ಬಳಸುವ ಅತ್ಯಾಧುನಿಕ ‘ಎಜೆಕ್ಷನ್ ಸೀಟು’ (Ejection Seats) ತಯಾರಿಕೆಯಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಮಾರ್ಟಿನ್-ಬೇಕರ್ ಕಂಪನಿಯು ರಾಜ್ಯದಲ್ಲಿ ₹380 ಕೋಟಿ ಹೂಡಿಕೆ ಮಾಡಲಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 5ನೇ ಹಂತದಲ್ಲಿ 10 ಎಕರೆ ಜಾಗದಲ್ಲಿ ಈ ಸ್ಥಾವರ ತಲೆಯೆತ್ತಲಿದ್ದು, ಉನ್ನತ ಕೌಶಲ್ಯದ 500ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಸದ್ಯ ಭಾರತೀಯ ವಾಯುಪಡೆ ಹಾಗೂ ನೌಕಾಪಡೆಯ ವಿಮಾನಗಳಲ್ಲಿ ಈ ಕಂಪನಿಯ 900ಕ್ಕೂ ಹೆಚ್ಚು ಎಜೆಕ್ಷನ್ ಸೀಟುಗಳು ಬಳಕೆಯಲ್ಲಿವೆ ಎಂದರು.
ವಿಜಯಪುರ ಹಾಗೂ ಬೆಂಗಳೂರಿನಲ್ಲಿ ಟಾನ್ಬೋ ಇಮೇಜಿಂಗ್ ಹೂಡಿಕೆ:
ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಥರ್ಮಲ್ ಇಮೇಜ್, ಎಲೆಕ್ಟ್ರೋ-ಆಪ್ಟಿಕಲ್ ಮತ್ತು ಆಧುನಿಕ ಸೆನ್ಸರ್ ಸಾಧನಗಳನ್ನು ತಯಾರಿಸುವ ಡೀಪ್-ಟೆಕ್ ಸಂಸ್ಥೆ ‘ಟಾನ್ಬೋ ಇಮೇಜಿಂಗ್’ ರಾಜ್ಯದಲ್ಲಿ ಹೂಡಿಕೆ ಮಾಡಲು ಸಜ್ಜಾಗಿದೆ. ಕಂಪನಿಯು ಹೈ-ಪವರ್ ಮೈಕ್ರೋವೇವ್ ತಯಾರಿಕಾ ಘಟಕಕ್ಕಾಗಿ ಬೆಂಗಳೂರಿನ ಐಟಿಐಆರ್ (ITIR) ವ್ಯಾಪ್ತಿಯಲ್ಲಿ 5 ಎಕರೆ ಹಾಗೂ ಅತ್ಯಾಧುನಿಕ ರಕ್ಷಣಾ ಸಾಧನಗಳ ಪರೀಕ್ಷೆ ಮತ್ತು ಮೌಲ್ಯಮಾಪನ ಸೌಲಭ್ಯಗಳಿಗಾಗಿ ವಿಜಯಪುರ ಜಿಲ್ಲೆಯ ಮುಳವಾಡದಲ್ಲಿ 130 ಎಕರೆ ಜಾಗವನ್ನು ಕೋರಿದೆ.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾರ್ಟಿನ್-ಬೇಕರ್ ಕಂಪನಿಯ ಸಿಎಫ್ಒ ರಾಬರ್ಟ್ ಮಾರ್ಗನ್ ಹಾಗೂ ಟಾನ್ಬೋ ಕಂಪನಿಯ ಸಹಸಂಸ್ಥಾಪಕಿ ಸಿಸಿಲಿಯಾ ಡಿಸೋಜ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಹೂಡಿಕೆಗಳಿಂದ ರಾಜ್ಯದಲ್ಲಿ ಸ್ವದೇಶಿ ರಕ್ಷಣಾ ಸಾಮಗ್ರಿ ತಯಾರಿಕೆ ಮತ್ತು ಪೂರೈಕೆ ಸರಪಳಿಗೆ ದೊಡ್ಡ ಬಲ ಸಿಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

