Wed. Nov 4th, 2026

ಬೆಂಗಳೂರು ಸಿಟಿ ಪೊಲೀಸ್ ಸಾಮಾಜಿಕ ಜಾಗೃತಿ ಪೋಸ್ಟ್‌: ವ್ಹೀಲಿಂಗ್ ಮಾಡಿದರೆ ಯಮರಾಜನೇ ಗತಿ!

Share this with Friends

ಬೆಂಗಳೂರು: ರಸ್ತೆ ಸುರಕ್ಷತೆ ಹಾಗೂ ಅಪಾಯಕಾರಿ ಬೈಕ್ ಸ್ಟಂಟ್‌ಗಳ ವಿರುದ್ಧ ಬೆಂಗಳೂರು ನಗರ ಪೊಲೀಸರು (Bengaluru City Police) ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಮಾದರಿಯ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ರಸ್ತೆಯಲ್ಲಿ ವ್ಹೀಲಿಂಗ್ ಮಾಡುವ ಯುವಕರಿಗೆ ಯಮರಾಜನೇ ಖುದ್ದಾಗಿ ಬಂದು ಬುದ್ಧಿ ಕಲಿಸುವಂತಹ ಕಲ್ಪನೆಯ ಕೃತಕ ಬುದ್ಧಿಮತ್ತೆ (AI) ಆಧಾರಿತ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆ ಹಾಗೂ ಫ್ಲೈಓವರ್‌ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಯುವಕರು ಜೀವದ ಹಂಗು ತೊರೆದು ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರ ವಾಹನಗಳ ಮುಂಭಾಗದ ಚಕ್ರವನ್ನು ಗಾಳಿಯಲ್ಲಿ ತೇಲಿಸಿ ‘ವ್ಹೀಲಿಂಗ್’ (Wheeling) ಮಾಡುವುದು ಹೆಚ್ಚಾಗುತ್ತಿದೆ. ಇದು ಕೇವಲ ಸ್ಟಂಟ್ ಮಾಡುವವರ ಜೀವಕ್ಕೆ ಮಾತ್ರವಲ್ಲದೆ, ರಸ್ತೆಯಲ್ಲಿ ಚಲಿಸುವ ಇತರ ಸಾರ್ವಜನಿಕರ ಪ್ರಾಣಕ್ಕೂ ಕಂಠಕವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನವಾಗಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಪೊಲೀಸರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಎಐ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾದ ವಿಶೇಷ ವೀಡಿಯೋ ಪ್ರಕಟಿಸಿದ್ದಾರೆ. ಅದರಲ್ಲಿ ಯುವಕನೊಬ್ಬ ರಸ್ತೆಯಲ್ಲಿ ಸ್ಕೂಟರ್ ವ್ಹೀಲಿಂಗ್ ಮಾಡುತ್ತಿದ್ದರೆ, ಅವನ ಬೆನ್ನಹಿಂದೆಯೇ ಯಮರಾಜನು ತನ್ನ ವಾಹನವಾದ ಎಮ್ಮೆಯ ಮೇಲೆ ಕುಳಿತು ಬೆನ್ನಟ್ಟುತ್ತಿರುವಂತೆ ಚಿತ್ರಿಸಲಾಗಿದೆ.

ಶವಪೆಟ್ಟಿಗೆಯ ಸವಾರಿ: ಬೈಕ್ ವ್ಹೀಲಿಂಗ್ ಮಾಡುತ್ತಿರುವ ಸವಾರನ ಹಿಂದೆ ಶವಪೆಟ್ಟಿಗೆಯನ್ನು ಹೆಗಲ ಮೇಲೆ ಹೊತ್ತ ಕಪ್ಪು ಕೋಟು ಧರಿಸಿದ ವ್ಯಕ್ತಿ ಓಡಿ ಬರುತ್ತಿದ್ದಾನೆ.

ಆಸ್ಪತ್ರೆಯ ತುರ್ತು ನಿಗಾ: ಮತ್ತೊಂದು ದೃಶ್ಯದಲ್ಲಿ ವ್ಹೀಲಿಂಗ್ ಮಾಡುತ್ತಿರುವ ಸವಾರನ ಹಿಂದೆ ನರ್ಸ್ ಒಬ್ಬರು ಆಸ್ಪತ್ರೆಯ ಸ್ಟ್ರೆಚರ್ (ಬೆಡ್) ಅನ್ನು ತಳ್ಳಿಕೊಂಡು ವೇಗವಾಗಿ ಧಾವಿಸುತ್ತಿದ್ದಾರೆ.

ಕ್ಷಣದ ಮೋಜು, ಒನ್-ವೇ ಟ್ರಿಪ್ ಆಗದಿರಲಿ:

“ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮ್ಮನ್ನು ಕರೆದೊಯ್ಯಲು ನನ್ನ ಸವಾರಿ ಸಿದ್ಧವಾಗಿದೆ ಎಂದು ಯಮರಾಜ ಹೇಳಬಹುದು! ಕ್ಷಣದ ಮೋಜಿಗೆ ಜೀವವನ್ನೇ ಪಣಕ್ಕಿಡಬೇಡಿ. ನಿಮ್ಮ ಜೀವನದ ಪಯಣವನ್ನು ಮರಳಿ ಬಾರದ ಲೋಕಕ್ಕೆ ಒನ್-ವೇ ಟ್ರಿಪ್ ಮಾಡಿಕೊಳ್ಳಬೇಡಿ. ಜವಾಬ್ದಾರಿಯಿಂದ ಚಾಲನೆ ಮಾಡಿ, ಬೇಜವಾಬ್ದಾರಿತನ ಬೇಡ,” ಎಂದು ಪೊಲೀಸರು ಮಾರ್ಮಿಕವಾಗಿ ಸಂದೇಶ ನೀಡಿದ್ದಾರೆ. ವ್ಹೀಲಿಂಗ್ ಮಾಡಿದರೆ ನೇರವಾಗಿ ಆಸ್ಪತ್ರೆ ಅಥವಾ ಶವಪೆಟ್ಟಿಗೆ ಸೇರಬೇಕಾಗುತ್ತದೆ ಎಂಬುದನ್ನು ಈ ಚಿತ್ರಗಳು ಸಾಂಕೇತಿಕವಾಗಿ ಸಾರುತ್ತಿವೆ.

ನೆಟ್ಟಿಗರ ಶ್ಲಾಘನೆ:

ಹ್ಯಾಶ್‌ಟ್ಯಾಗ್‌ಗಳಾದ #SayNoToWheeling, #RoadSafety, ಮತ್ತು #BengaluruCityPolice ಅಡಿಯಲ್ಲಿ ಹಂಚಿಕೊಳ್ಳಲಾಗಿರುವ ಈ ಪೋಸ್ಟ್‌ಗೆ ಸಾರ್ವಜನಿಕ ವಲಯ ಹಾಗೂ ನೆಟ್ಟಿಗರಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಇಂತಹ ಕಲ್ಪನಾತ್ಮಕ ಚಿತ್ರಗಳ ಮೂಲಕ ಯುವ ಪೀಳಿಗೆಗೆ ಬುದ್ಧಿ ಹೇಳುತ್ತಿರುವ ಪೊಲೀಸ್ ಇಲಾಖೆಯ ಸೃಜನಶೀಲತೆಗೆ ಜನ ಮೆಚ್ಚುಗೆ ಸೂಚಿಸಿದ್ದಾರೆ. ರಸ್ತೆ ಸುರಕ್ಷತೆ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವಂತೆ ಮಾಡಲು ಇಂತಹ ಅಭಿಯಾನಗಳು ಸಹಕಾರಿ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

 


Share this with Friends

Related Post