Sat. Nov 7th, 2026

ಕೆಪಿಎಸ್ಸಿ ಪರೀಕ್ಷೆ ಮುಂದೂಡಿ:ಕುಮಾರಸ್ವಾಮಿ ಆಗ್ರಹ

Share this with Friends

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಹಮ್ಮಿಕೊಂಡಿರುವ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ತಕ್ಷಣವೇ ಮುಂದೂಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಶನಿವಾರ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು, ನವೆಂಬರ್ 15ರಂದು ನಿಗದಿಯಾಗಿರುವ 319 ಗೆಜೆಟೆಡ್ ಪ್ರೊಬೇಷನರಿ (KAS) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಕೆಪಿಎಸ್ಸಿಯಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದಿರುವ ಅಕ್ರಮಗಳ ಕುರಿತು ಇಡಿ, ಸಿಐಡಿ ಹಾಗೂ ಎಸ್ಐಟಿ ತನಿಖೆಗಳು ಪ್ರಗತಿಯಲ್ಲಿದ್ದು, ಆರ್ಥಿಕ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಇಂತಹ ಗೊಂದಲದ ನಡುವೆ ಪರೀಕ್ಷೆ ನಡೆಸಿದರೆ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಫ್ರೀಡಂ ಪಾರ್ಕ್‌ನಲ್ಲಿ ಅಭ್ಯರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಗಮನಿಸಿ, ಸಂಸ್ಥೆಯಲ್ಲಿ ಪಾರದರ್ಶಕತೆ ತಂದ ಬಳಿಕವೇ ಮುಂದುವರಿಯಬೇಕು ಎಂದರು.

ರೈತರು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ:

ರಾಜ್ಯ ಸರ್ಕಾರವು ಬೆಳೆ ವಿಮೆ ಯೋಜನೆಯಲ್ಲಿ ತನ್ನ ಪಾಲಿನ ವಂತಿಗೆಯನ್ನು (ಮ್ಯಾಚಿಂಗ್ ಗ್ರಾಂಟ್) ಬಿಡುಗಡೆ ಮಾಡದೆ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು, ವಿಮಾ ಕಂಪನಿಗಳು ರೈತರಿಗೆ ವಂಚಿಸುತ್ತಿದ್ದರೂ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಟೀಕಿಸಿದರು. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಹೊಸ ಯೋಜನೆಗಳನ್ನು ಘೋಷಿಸುತ್ತಿರುವ ಸರ್ಕಾರ, ಹಳೆಯ ಕಾಮಗಾರಿಗಳ ₹39,000 ಕೋಟಿ ಬಾಕಿಯನ್ನು ಗುತ್ತಿಗೆದಾರರಿಗೆ ಪಾವತಿಸಿಲ್ಲ. ‘ಪ್ಯಾಕೇಜ್ ಸಿಸ್ಟಮ್’ ಮೂಲಕ ಹೊರರಾಜ್ಯದ ಗುತ್ತಿಗೆದಾರರಿಗೆ ಮಣೆ ಹಾಕುತ್ತಿರುವುದರಿಂದ ಸ್ಥಳೀಯ ಉದ್ಯಮಿಗಳ ಖಾತೆಗಳು ಎನ್‌ಪಿಎ ಆಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಮನಗರ ವೈದ್ಯಕೀಯ ಕಾಲೇಜು ವಿವಾದ:

ರಾಮನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ಥಳಾಂತರ ತೀರ್ಮಾನವನ್ನು 2006ರಲ್ಲೇ ತಾವು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದಾಗಿ ಸ್ಪಷ್ಟಪಡಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು ಈ ಯೋಜನೆಯ ಕ್ರೆಡಿಟ್ ಪಡೆಯಲು ಸುಳ್ಳು ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಕನಕಪುರ ಮೆಡಿಕಲ್ ಕಾಲೇಜಿಗೆ ಮೈತ್ರಿ ಸರ್ಕಾರದ ಅವಧಿಯಲ್ಲೇ ಒಪ್ಪಿಗೆ ನೀಡಲಾಗಿತ್ತು. ಉಳಿದಂತೆ ರಾಮನಗರ ಜಿಲ್ಲೆಯಲ್ಲಿರುವ ಚಾಮುಂಡೇಶ್ವರಿ ಮತ್ತು ಹಾರೋಹಳ್ಳಿಯ ದಯಾನಂದ ಸಾಗರ್ ಮೆಡಿಕಲ್ ಕಾಲೇಜುಗಳು ಖಾಸಗಿಯವರದ್ದಾಗಿದ್ದು, ಇದರಲ್ಲಿ ಕಾಂಗ್ರೆಸ್ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಸೇಡಿನ ಹಾಗೂ ಜಾತಿ ರಾಜಕಾರಣ ಬಿಟ್ಟು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವಂತೆ ಸರ್ಕಾರಕ್ಕೆ ಕಿವಿಮಾತು ಹೇಳಿದರು.

ಜೆಡಿಎಸ್ ಸೇರಿದ ಕಾಂಗ್ರೆಸ್ ಮುಖಂಡರು:

ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ 20ಕ್ಕೂ ಹೆಚ್ಚು ಪ್ರಮುಖ ನಾಯಕರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ. ನಾಗರಾಜಯ್ಯ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಜಿ.ಪಂ. ಮಾಜಿ ಸದಸ್ಯರಾದ ಕೆಂಪಿರೇಗೌಡ, ಶಿವಶಂಕರ, ನಾರಾಯಣಪ್ಪ ಸೇರಿದಂತೆ ಹಲವು ಪ್ರಮುಖರು ಕಾಂಗ್ರೆಸ್ ತೊರೆದಿದ್ದು, ಜೆಡಿಎಸ್ ಮುಖಂಡರಾದ ರವಿ, ಜಗದೀಶ್ ಹಾಗೂ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಉಪಸ್ಥಿತರಿದ್ದರು.

 


Share this with Friends

Related Post