Sat. Nov 7th, 2026

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ರಾಮಲಿಂಗಾರೆಡ್ಡಿ ಭೇಟಿ: ವನ್ಯಜೀವಿ ರಕ್ಷಣೆ ಮತ್ತು ಮಾನವ-ಸಂಘರ್ಷ ತಡೆಗೆ ಸಮಗ್ರ ಪರಿಶೀಲನೆ

Share this with Friends

ಬಂಡೀಪುರ: ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ಮಾನವ-ವನ್ಯಜೀವಿ ಸಂಘರ್ಷ ತಡೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯ ಕುರಿತು ಪ್ರಗತಿ ಪರಿಶೀಲನೆ ನಡೆಸಲು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕ್ಷೇತ್ರ ಭೇಟಿ ನೀಡಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು.

ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ 155 ಕ್ಕೂ ಹೆಚ್ಚು ದಾಟಿದ್ದು, ಸಮೃದ್ಧ ಜೀವವೈವಿಧ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು. ಕಾಡಿನ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಮುಂಚೂಣಿ ಸಿಬ್ಬಂದಿಗೆ ಪಡಿತರ ಕಿಟ್‌ಗಳು ಹಾಗೂ ಗಸ್ತು ತಿರುಗಲು ಹೊಸ ವಾಹನಗಳನ್ನು ವಿತರಿಸಲಾಯಿತು. ಜೊತೆಗೆ ಆನೆ ಮತ್ತು ಚಿರತೆ ಕಾರ್ಯಪಡೆಗಳ ಸಿಬ್ಬಂದಿಯನ್ನು ಭೇಟಿ ಮಾಡಿ ಸಾರ್ವಜನಿಕ ಸುರಕ್ಷತೆಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಪ್ರಮುಖ ಲೋಕಾರ್ಪಣೆಗಳು ಮತ್ತು ನಿರ್ಧಾರಗಳು:

ಕೈಪಿಡಿ ಬಿಡುಗಡೆ: ಅರಣ್ಯ ಇಲಾಖೆ ವತಿಯಿಂದ ಸಿದ್ಧಪಡಿಸಲಾದ “ಡ್ರೋನ್ ಪೈಲಟ್ ಕ್ಷೇತ್ರ ಕೈಪಿಡಿ” (Drone Pilot Field Manual) ಯನ್ನು ಬಿಡುಗಡೆ ಮಾಡಲಾಯಿತು.

ಇಕೋ-ಟೂರಿಸಮ್ ಪ್ಲಾಟ್‌ಫಾರ್ಮ್: ಪ್ರವಾಸಿಗರಿಗೆ ಉತ್ತಮ ಸೇವೆ ನೀಡಲು ಮತ್ತು ಕುಂದುಕೊರತೆಗಳ ನಿವಾರಣೆಗಾಗಿ “ಇಕೋ-ಟೂರಿಸಮ್ ಕ್ವಾಲಿಟಿ ಅಶ್ಯುರೆನ್ಸ್ & ವಿಸಿಟರ್ ರಿಡ್ರೆಸಲ್ ಪ್ಲಾಟ್‌ಫಾರ್ಮ್” ಅನ್ನು ಲೋಕಾರ್ಪಣೆ ಮಾಡಲಾಯಿತು.

ತಂತ್ರಜ್ಞಾನದ ಬಳಕೆ: ವನ್ಯಜೀವಿಗಳ ನಿಗಾಕ್ಕಾಗಿ ಬಳಸಲಾಗುತ್ತಿರುವ ಥರ್ಮಲ್ ಡ್ರೋಣ್‌ಗಳು, ಜಿಪಿಎಸ್ ರೇಡಿಯೋ ಕಾಲರ್‌ಗಳು ಮತ್ತು ಶ್ವಾನ ದಳದ ಕಾರ್ಯವೈಖರಿಯನ್ನು ಸಚಿವರು ವೀಕ್ಷಿಸಿದರು.

ಒತ್ತುವರಿ ತೆರವು ಮತ್ತು ಸಂಘರ್ಷ ತಡೆಗೆ ಸೂಚನೆ:

ಕಾಡು ಪ್ರಾಣಿಗಳು ನಾಡಿಗೆ ಬರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್, ಸೋಲಾರ್ ಫೆನ್ಸಿಂಗ್ ಹಾಗೂ ಆನೆ ಕಂದಕಗಳ ಸಮರ್ಪಕ ನಿರ್ವಹಣೆಗೆ ಸೂಚಿಸಲಾಯಿತು. ಬಂಡೀಪುರ ವ್ಯಾಪ್ತಿಯಲ್ಲಿ ಆಗಿರುವ ಅರಣ್ಯ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲು ಹಾಗೂ ಕಳ್ಳಬೇಟೆ ತಡೆ ಶಿಬಿರಗಳನ್ನು (APC Camps) ದುರಸ್ತಿ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಲಾಯಿತು. ಹೊರರಾಜ್ಯದಿಂದ ಬರುವ ವೈದ್ಯಕೀಯ ತ್ಯಾಜ್ಯ ವಿಲೇವಾರಿಯನ್ನು ಮೂಲೇಹೊಳೆ ಚೆಕ್‌ಪೋಸ್ಟ್‌ನಲ್ಲಿ ಕಟ್ಟುನಿಟ್ಟಾಗಿ ತಡೆಯಲು ಸೂಚಿಸಿದ ಸಚಿವರು, ವನ್ಯಜೀವಿ ದಾಳಿಯಿಂದ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.

ಇದೇ ವೇಳೆ ಕಾಡಿನ ಪರಿಸರಕ್ಕೆ ಮಾರಕವಾಗಿರುವ ಲ್ಯಾಂಟಾನಾ ಮತ್ತು ಸೆನ್ನಾ ಸ್ಪೆಕ್ಟಾಬಿಲಿಸ್‌ನಂತಹ ಆಕ್ರಮಣಕಾರಿ ಕಳೆಗಳನ್ನು ವೈಜ್ಞಾನಿಕವಾಗಿ ಮುಕ್ತಗೊಳಿಸಲು ಮತ್ತು ಕಾಳ್ಗಿಚ್ಚು ತಡೆ ಮುನ್ನೆಚ್ಚರಿಕೆಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 


Share this with Friends

Related Post