Sat. Nov 7th, 2026

ಕಾಂಗ್ರೆಸ್ ಸರ್ಕಾರದಿಂದ 250 ಕೋಟಿ ಲೂಟಿ: ಎಚ್.ಡಿ. ಕುಮಾರಸ್ವಾಮಿ ಆರೋಪ

Share this with Friends

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಮರ್ಪಕ ಮೂಲಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರವು ಕೇವಲ ಬೆಲೆ ಏರಿಕೆ ಮಾಡುವ ಮೂಲಕ ಜನರ ಮೇಲೆ ಬರೆ ಎಳೆಯುತ್ತಿದೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪುಲಿಕೇಶಿ ನಗರದಲ್ಲಿ ₹250 ಕೋಟಿ ಹಗರಣ ಹಾಗೂ ಬೆಲೆ ಏರಿಕೆ ಅಸ್ತ್ರ

₹250 ಕೋಟಿ ತೆರಿಗೆ ಹಣ ಲೂಟಿ: ಪುಲಿಕೇಶಿ ನಗರ ಕ್ಷೇತ್ರದ ಜನತೆ ಕುಡಿಯುವ ನೀರು ಹಾಗೂ ಚರಂಡಿ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಆದರೆ, ಈ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಸುಮಾರು ₹250 ಕೋಟಿಗೂ ಹೆಚ್ಚು ಹಣ ಲೂಟಿಯಾಗಿದೆ ಎಂದು ಸಚಿವರು ಗಂಭೀರವಾಗಿ ಆರೋಪಿಸಿದರು.

ಹಾಲು ಮತ್ತು ಬಸ್ ದರ ಏರಿಕೆ ಬರೆ: ಹಾಲಿನ ದರವನ್ನು ಲೀಟರ್‌ಗೆ ₹10 ರಿಂದ ₹12 ರಷ್ಟು ಹೆಚ್ಚಿಸಿರುವುದು ಬಡವರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಇದರೊಂದಿಗೆ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇ. 45 ರಷ್ಟು ಹೆಚ್ಚಳ ಮಾಡಲಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ, ಮತ್ತೊಂದೆಡೆ ಬಸ್ ಹಾಗೂ ಪಾಸ್ ದರ ಏರಿಸಿ ಉಲ್ಟಾ ಹೊರೆ ಹಾಕಲಾಗುತ್ತಿದೆ ಎಂದು ದೂರಿದರು.

ಪ್ರತಿಭಟನಾ ಹಕ್ಕಿನ ಹರಣ: ಸರ್ಕಾರದ ವೈಫಲ್ಯಗಳ ವಿರುದ್ಧ ಧ್ವನಿ ಎತ್ತಲು ಜನರು ಮುಂದಾದರೆ 50-100 ಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ಕೋರ್ಟ್ ಆದೇಶಗಳ ನೆಪವೊಡ್ಡಿ ಜನರ ಪ್ರತಿಭಟಿಸುವ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜೆಡಿಎಸ್ ಸೇರ್ಪಡೆ: ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಇರ್ಫಾನ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ನಾಗರಭಾವಿ ‘ಕ್ಲೌಡ್ ನೈನ್’ ಆಸ್ಪತ್ರೆ ವಿರುದ್ಧ ಕಠಿಣ ಎಚ್ಚರಿಕೆ

ನಾಗರಭಾವಿಯ ಕ್ಲೌಡ್ ನೈನ್ (Cloudnine) ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿತನದಿಂದಾಗಿ ಮೂರುವರೆ ತಿಂಗಳಿಂದ ಮಗುವೊಂದು ಆಸ್ಪತ್ರೆಯಲ್ಲಿ ನರಳುತ್ತಿರುವುದಕ್ಕೆ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲೆಯ ಕಟ್ಟೆದೊಡ್ಡಿ ಗ್ರಾಮದ ಸಂಪತ್ ಎಂಬುವವರ ಒಂದೂವರೆ ವರ್ಷದ ಮಗು ಶಮನ್‌ಗೆ ಆಸ್ಪತ್ರೆಯಲ್ಲಿ ಅನಸ್ತೇಶಿಯಾ ನೀಡಿದ ಬಳಿಕ ಮಗು ತೀವ್ರ ಅನಾರೋಗ್ಯಕ್ಕೆ ಒಳಗಾಗಿದೆ. ಆಸ್ಪತ್ರೆಯ ಆಡಳಿತ ಮಂಡಳಿ ತನ್ನ ನಿರ್ಲಕ್ಷ್ಯಕ್ಕೆ ಯಾವುದೇ ಜವಾಬ್ದಾರಿ ವಹಿಸಿಕೊಳ್ಳದೆ ದುಬಾರಿ ಶುಲ್ಕ ವಸೂಲಿ ಮಾಡುತ್ತಿದೆ. ಆಸ್ಪತ್ರೆಯ ಅಸಡ್ಡೆಯಿಂದಾಗಿ ಮಗುವಿನ ಹೆತ್ತವರು ರಸ್ತೆಯಲ್ಲಿ ಮಲಗುವಂತಾಗಿದೆ.

“ಆಸ್ಪತ್ರೆಯವರು ಮಗುವಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಬೇಕು, ಇಲ್ಲವೇ ಸರ್ಕಾರವೇ ಈ ಜವಾಬ್ದಾರಿಯನ್ನು ಹೊರಬೇಕು. ರಾಜ್ಯ ಆರೋಗ್ಯ ಸಚಿವರು ಇಂತಹ ದುಬಾರಿ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ನಾನೇ ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ಮುತ್ತಿಗೆ ಹಾಕಬೇಕಾಗುತ್ತದೆ” ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

 


Share this with Friends

Related Post