ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ಸುಸ್ಥಿರಗೊಳಿಸಲು ಹೊಸ ಟೆಂಡರ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ನವೆಂಬರ್ ಅಂತ್ಯದೊಳಗೆ ಮೊದಲ ಹಂತವಾಗಿ ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ಮಾದರಿಯಡಿ ಕಸ ಸಂಗ್ರಹಣೆ ಕಾರ್ಯ ಆರಂಭವಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ವಿವಿಧ ನಗರ ಪಾಲಿಕೆಗಳ ಆಯುಕ್ತರ ಉಪಸ್ಥಿತಿಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು.
ಮೊದಲ ಹಂತದಲ್ಲಿ 4 ಕ್ಷೇತ್ರಗಳು:
ಮೊದಲ ಹಂತದಲ್ಲಿ ಗೋವಿಂದರಾಜನಗರ, ಮಹಾಲಕ್ಷ್ಮಿ ಲೇಔಟ್, ವಿಜಯನಗರ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ ಅಂತ್ಯದೊಳಗೆ ಹೊಸ ಟೆಂಡರ್ ಅಡಿಯಲ್ಲಿ ಹಂತ ಹಂತವಾಗಿ ಕಸ ಸಂಗ್ರಹಣೆ ಕಾರ್ಯ ಆರಂಭವಾಗಲಿದೆ. ಉಳಿದಂತೆ ಡಿಸೆಂಬರ್ ತಿಂಗಳಿನಲ್ಲಿ ಚಿಕ್ಕಪೇಟೆ ಕ್ಷೇತ್ರದಲ್ಲೂ ಈ ನೂತನ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಚಿವರು ವಿವರಿಸಿದರು.
ಜಿಪಿಎಸ್ ಕಡ್ಡಾಯ, ತಪ್ಪಿದರೆ ಗುತ್ತಿಗೆದಾರರಿಗೆ ದಂಡ:
ಕಸ ಸಂಗ್ರಹಣಾ ವಾಹನಗಳ ಕಾರ್ಯಾಚರಣೆಯ ಮೇಲೆ ನಿಗಾ ಇಡಲು ತಂತ್ರಜ್ಞಾನದ ಮೊರೆ ಹೋಗಲಾಗಿದ್ದು, ಎಲ್ಲಾ ವಾಹನಗಳಿಗೂ ಜಿಪಿಎಸ್ (GPS) ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಜಿಪಿಎಸ್ ದತ್ತಾಂಶದ ಆಧಾರದ ಮೇಲಷ್ಟೇ ಸಿಸ್ಟಂ ಜನರೇಟೆಡ್ ಬಿಲ್ ಸಿದ್ಧಪಡಿಸಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗುತ್ತದೆ. ಜಿಪಿಎಸ್ ಇಲ್ಲದ ವಾಹನಗಳಿಗೆ ಆ ದಿನದ ಬಿಲ್ ಪಾವತಿಸುವುದಿಲ್ಲ ಹಾಗೂ ನಿಯಮ ಉಲ್ಲಂಘಿಸಿದ ಗುತ್ತಿಗೆದಾರರಿಗೆ ಭಾರೀ ದಂಡ ವಿಧಿಸಲಾಗುವುದು. ವಾಹನಗಳ ನಿಖರ ಸಂಚಾರವನ್ನು ‘Vahan’ ಪೋರ್ಟಲ್ ಮತ್ತು ಇನ್‌ವಾಯ್ಸ್ ವ್ಯವಸ್ಥೆಯ ಮೂಲಕ ಕಟ್ಟುನಿಟ್ಟಾಗಿ ಪರಿಶೀಲಿಸಲಾಗುವುದು ಎಂದರು.
ಏಕರೂಪದ ಬ್ರ್ಯಾಂಡಿಂಗ್ ಮತ್ತು ಸಿಬ್ಬಂದಿಗೆ ಸಮವಸ್ತ್ರ:
ಸಾರ್ವಜನಿಕರಲ್ಲಿ ಗೊಂದಲ ನಿವಾರಿಸಲು ಮತ್ತು ಕಸದ ವಾಹನಗಳನ್ನು ಸುಲಭವಾಗಿ ಗುರುತಿಸಲು ಎಲ್ಲಾ ವಾಹನಗಳಿಗೆ ಏಕರೂಪದ ಸ್ಟಿಕ್ಕರ್ ಹಾಗೂ ಬ್ರ್ಯಾಂಡಿಂಗ್ ಮಾಡಲಾಗುವುದು. ಅಲ್ಲದೆ ಸ್ವಚ್ಛತಾ ಸಿಬ್ಬಂದಿಗೆ ಹೊಸ ಸಮವಸ್ತ್ರ ಮತ್ತು ಅಗತ್ಯ ಸುರಕ್ಷತಾ ಪರಿಕರಗಳನ್ನು ನೀಡಲಾಗುವುದು. ಸಾರ್ವಜನಿಕರಿಗೆ ಈ ಹೊಸ ವ್ಯವಸ್ಥೆಯ ಕುರಿತು ಮಾಹಿತಿ ತಲುಪಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC) ಚಟುವಟಿಕೆಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಲು ಇಲಾಖೆಗೆ ನಿರ್ದೇಶಿಸಲಾಗಿದೆ.
ಬ್ಲ್ಯಾಕ್ ಸ್ಪಾಟ್‌ಗಳ ಸಂಪೂರ್ಣ ನಿರ್ಮೂಲನೆ:
ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸೃಷ್ಟಿಯಾಗಿರುವ ಬ್ಲ್ಯಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಗರದ ಒಟ್ಟು 33 ಹೊಸ ಘನತ್ಯಾಜ್ಯ ನಿರ್ವಹಣಾ ಪ್ಯಾಕೇಜ್‌ಗಳ ಪೈಕಿ 5 ಪ್ಯಾಕೇಜ್‌ಗಳಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದ್ದು, 13 ಪ್ಯಾಕೇಜ್‌ಗಳಿಗೆ ಒಪ್ಪಿಗೆ ಪತ್ರ ನೀಡಲಾಗಿದೆ. ಉಳಿದ 10 ಪ್ಯಾಕೇಜ್‌ಗಳು ಸರ್ಕಾರದ ಅನುಮೋದನೆಗೆ ರವಾನೆಯಾಗಿದ್ದು, ಇನ್ನುಳಿದ 5 ಪ್ಯಾಕೇಜ್‌ಗಳು ವಿವಿಧ ಹಂತಗಳಲ್ಲಿವೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

