ಕೊಪ್ಪಳ: ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರತಿ ರೈತನಿಗೆ ಒಟ್ಟು 5,000 ಬರ ಪರಿಹಾರ ನೀಡಲು ಮಹತ್ವದ ತೀರ್ಮಾನ ಕೈಗೊಂಡಿದ್ದು, ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ತಕ್ಷಣವೇ ರೈತರಿಗೆ ತನ್ನ ಪಾಲಿನ ಪರಿಹಾರ ಮೊತ್ತವನ್ನು ಘೋಷಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬರ ಪರಿಹಾರವಾಗಿ ಪ್ರತಿ ರೈತನಿಗೆ 2,500 ನೀಡಲು ನಿರ್ಧರಿಸಲಾಗಿತ್ತು. ಆದರೆ ರೈತರ ಸಂಕಷ್ಟಕ್ಕೆ ಹೆಗಲಾಗಲು ಈಗ ಹೆಚ್ಚುವರಿಯಾಗಿ ಮತ್ತೊಂದು ಕಂತಿನ 2,500 ಸೇರಿಸಿ ಒಟ್ಟು 5,000 ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು. ಈಗಾಗಲೇ ಮೊದಲ ಕಂತಿನ ಹಣವನ್ನು ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ರೈತರ ಖಾತೆಗಳಿಗೆ ಜಮೆ ಮಾಡಲಾಗಿದ್ದು, ತಾಂತ್ರಿಕ ಕಾರಣಗಳಿಂದ ತಲುಪದ ರೈತರು ಮನವಿ ಸಲ್ಲಿಸಿದರೆ ತಕ್ಷಣ ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಬೆಲೆ ಏರಿಕೆಗೆ ಕೇಂದ್ರದ ಜಿಎಸ್ಟಿ ಹಾಗೂ ಇಂಧನ ನೀತಿಯೇ ಕಾರಣ
ರಾಜ್ಯದಲ್ಲಿನ ಬೆಲೆ ಏರಿಕೆ ಕುರಿತು ಬಿಜೆಪಿಯ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವರು, “ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಲು ಕೇಂದ್ರ ಸರ್ಕಾರದ ಅವೈಜ್ಞಾನಿಕ ಜಿಎಸ್ಟಿ ನೀತಿ ಹಾಗೂ ಪೆಟ್ರೋಲ್, ಡೀಸೆಲ್ ದರಗಳ ನಿರಂತರ ಏರಿಕೆಯೇ ಮೂಲ ಕಾರಣ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿದ್ದಾಗಲೂ ಕೇಂದ್ರ ಸರ್ಕಾರ ಇಂಧನ ದರಗಳನ್ನು ಹೆಚ್ಚಿಸಿ ಸಾರ್ವಜನಿಕರನ್ನು ಲೂಟಿ ಮಾಡಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿದ್ದ ಸಿಲಿಂಡರ್ ಹಾಗೂ ಪೆಟ್ರೋಲ್ ದರಗಳಿಗೂ, ಇಂದಿನ ದರಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಿರುವಾಗ ರಾಜ್ಯ ಸರ್ಕಾರವನ್ನು ಪ್ರಶ್ನಿಸಲು ಬಿಜೆಪಿ ನಾಯಕರಿಗೆ ಯಾವ ನೈತಿಕ ಹಕ್ಕಿದೆ?” ಎಂದು ಪ್ರಶ್ನಿಸಿದರು.
ಬಿಜೆಪಿಯಷ್ಟು ವಿಫಲ ವಿರೋಧ ಪಕ್ಷ ಮತ್ತೊಂದಿಲ್ಲ
“ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿರುವುದು ಸರ್ಕಾರದ ವೈಫಲ್ಯವೇ?” ಎಂದು ಆಕ್ರೋಶ ಹೊರಹಾಕಿದ ತಂಗಡಗಿ, ಕರ್ನಾಟಕದ ಇತಿಹಾಸದಲ್ಲೇ ಬಿಜೆಪಿಯಷ್ಟು ವಿಫಲವಾದ ವಿರೋಧ ಪಕ್ಷ ಮತ್ತೊಂದಿಲ್ಲ ಎಂದು ವಾಗ್ದಾಳಿ ನಡೆಸಿದರು. ಆಡಳಿತ ನಡೆಸುವಾಗ ಸಣ್ಣಪುಟ್ಟ ಸವಾಲುಗಳು ಎದುರಾಗುವುದು ಸಹಜ, ನಮ್ಮ ಸರ್ಕಾರ ಆ ಸಮಸ್ಯೆಗಳನ್ನು ಸಮರ್ಥವಾಗಿ ಬಗೆಹರಿಸುತ್ತಿದೆ. ವಿಪಕ್ಷ ನಾಯಕರಿಗೆ ನಿಜವಾಗಿಯೂ ಮಾನ-ಮರ್ಯಾದೆ ಮತ್ತು ರೈತರ ಹಿತದ ಬಗ್ಗೆ ಕಾಳಜಿ ಇದ್ದರೆ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಜಿಎಸ್ಟಿ ಹಾಗೂ ಇಂಧನ ದರಗಳನ್ನು ಕಡಿಮೆ ಮಾಡಿಸಲಿ. ಆಗ ದೇಶದಲ್ಲಿ ತಾನಾಗಿಯೇ ಬೆಲೆ ಏರಿಕೆ ಇಳಿಕೆಯಾಗಲಿದೆ ಎಂದು ಸವಾಲು ಹಾಕಿದರು.

